ಡಿಗ್ರಿ ಪೂರೈಸುವುದು ಶಿಕ್ಷಣ ಅಲ್ಲ: ನ್ಯಾ. ಅಬ್ದುಲ್ ನಜೀರ್

KannadaprabhaNewsNetwork |  
Published : Aug 31, 2025, 02:00 AM IST
ಡಿಗ್ರಿ ಪೂರೈಸುವುದು ಅಥವಾ ಕಂಠಪಾಠ ಮಾಡಿ ರ‍್ಯಾಂಕ್, ಪದಕ ಪಡೆಯುವುದು ಶಿಕ್ಷಣ ಅಲ್ಲ-ನ್ಯಾ. ಅಬ್ದುಲ್ ನಜೀರ್ | Kannada Prabha

ಸಾರಾಂಶ

ಮಂಗಳೂರು ವಿವಿ ಘಟಕ ಕಾಲೇಜು ಬನ್ನಡ್ಕದಲ್ಲಿ ಪ್ರೇರಣಾ ದಿವಸ ಕಾರ್ಯಕ್ರಮ ನಡೆಯಿತು. ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಜೀರ್ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಡಿಗ್ರಿ ಪೂರೈಸುವುದು ಅಥವಾ ಕಂಠಪಾಠ ಮಾಡಿ ರ‍್ಯಾಂಕ್, ಪದಕ ಪಡೆಯುವುದು ಶಿಕ್ಷಣ ಅಲ್ಲ. ಬದುಕಿನಲ್ಲಿ ಎದುರಾಗುವ ಸವಾಲು ಹಾಗೂ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆತ್ಮಸೈರ್ಯ ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಜೀರ್ ಹೇಳಿದರು.

ಮಂಗಳೂರು ವಿವಿ ಘಟಕ ಕಾಲೇಜು ಬನ್ನಡ್ಕದಲ್ಲಿ ಶನಿವಾರ ಪ್ರೇರಣಾ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸಬೇಕು. ಈ ಮೂಲಕ ನಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬೇಕು. ವಿದ್ಯಾರ್ಥಿಗಳು ಕೇವಲ ಭವಿಷ್ಯದ ನೌಕಕರಾಗಬಾರದು. ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರರಾಗಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕರಲ್ಲೂ ಇಂತಹ ಮನೋಭಾವ ಇರಬೇಕು ಎಂದರು.ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ೨೦೨೧ರಲ್ಲಿ ಪ್ರಾರಂಭವಾದ ಬನ್ನಡ್ಕ ಘಟಕ ಕಾಲೇಜು ಮಂಗಳೂರು ವಿವಿಯ ಕಠಿಣ ನಿಯಮಗಳಿಂದಾಗಿ ಸಂಕಷ್ಟದಲ್ಲಿದೆ. ಕೆಲವು ವಿಭಾಗಗಳನ್ನು ರದ್ದುಪಡಿಲಾಗಿದೆ. ಕಾಲೇಜನ್ನು ಮುಚ್ಚಲಾಗುತ್ತದೆ ಎಂಬ ಅಪಪ್ರಚಾರವು ಕೇಳಿಬರುತ್ತಿದೆ. ನನ್ನ ಕನಸಿನ ಯೋಜನೆಯ ಈ ಕಾಲೇಜು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದರು.

ಮಂಗಳೂರು ವಿವಿ ಉಪಕುಲಪತಿ ಪ್ರೊ.ಎಸ್.ಎಲ್. ಧರ್ಮ ಮಾತನಾಡಿ, ಬನ್ನಡ್ಕದ ಘಟಕ ಕಾಲೇಜು ವಿಷಯದಲ್ಲಿ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ನನ್ನನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿದ್ದಾರೆ. ಈ ಕಾಲೇಜನ್ನು ಮುಚ್ಚಲೆಂದೇ ನಾನು ಕುಲಪತಿಯಾಗಿ ಬಂದಿದ್ದೇನೆ ಎಂದು ಅವರೆಲ್ಲ ತಿಳಿದುಕೊಂಡಂತಿದೆ. ಯಾವುದೇ ಕಾರಣಕ್ಕೂ ನಾನು ಕಾಲೇಜನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಸರ್ಕಾರದ ನಿಯಮವನ್ನು ಪಾಲಿಸಬೇಕಾಗಿದೆಯಷ್ಟೇ. ಬನ್ನಡ್ಕ ಕಾಲೇಜನ್ನು ಸರ್ಕಾರದ ಸುಪರ್ದಿಗೆ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ., ತಹಸೀಲ್ದಾರ್ ಶ್ರೀಧರ್ ಮುಂದಲಮನಿ, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು. ಕಾಲೇಜಿನ ಸಂಯೋಜಕರಾದ ಕುಮಾರ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಆಶಾ ಶಾಲೆಟ್ ಡಿಸೋಜಾ ನಿರೂಪಿಸಿದರು. ಸುಧಾಕರ ವಂದಿಸಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ