ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ ಕಾಮಗಾರಿ ಪ್ರಗತಿ ಪರಿಶೀಲನೆಯಲ್ಲಿ ಡಾ.ಸಿದ್ದೇಶ್ವರ ತಾಕೀತು
ಕನ್ನಡಪ್ರಭ ವಾರ್ತೆ ದಾವಣಗೆರೆಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಹಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಇಂಜಿನಿಯರ್‌ಗಳು ವಿಳಂಬ ಮಾಡದೇ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಇಂಜಿನಿಯರ್‌ಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಮಗಾರಿ ಪೂರ್ಣಗೊಳಿಸಲು ನಿಮಗೆ ಯಾವುದೇ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದರು.ಅಧಿಕಾರಿಗಳು, ಇಂಜಿನಿಯರ್‌ಗಳು ನಿಗದಿತ ಅವದಿಯಲ್ಲಿ ತಮಗೆ ವಹಿಸಿದ ಸರ್ಕಾರಿ ಶಾಲಾ ಕೊಠಡಿ, ವಿದ್ಯುತ್ ಕಂಬ ತೆರವು, ಬಸ್ಸು ತಂಗುದಾಣ, ಸಮುದಾಯ ಭವನ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ರಸ್ತೆ ಕಾಮಗಾರಿಗಳ ನಿರ್ಮಾಣದ ವಿಚಾರದಲ್ಲಿ ಉದಾಸೀನ ಮಾಡದೇ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿರಬೇಕು ಎಂದು ಹೇಳಿದರು.
ಕಾಮಗಾರಿ ಅನುಷ್ಠಾನಾಧಿಕಾರಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮಾಹಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ, ಪ್ರಗತಿ ತೋರಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪರಿಶೀಲನೆ ನಡೆಸಿ, ಇಂತಹ ಮಾಹಿತಿ ನೀಡಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು. ಕಾಮಗಾರಿಗೆ ಸಂಬಂಧಿಸಿದಂತೆ ವಾಸ್ತವ, ಪಾರದರ್ಶಕ ವಿವರ ನೀಡಲು ಕ್ರಮ ಕೈಗೊಳ್ಳಿ ಎಂದು ಡಿಸಿ ಡಾ.ಎಂ.ವಿ.ವೆಂಕಟೇಶ್ ಗೆ ಸೂಚಿಸಿದರು.ದಾವಣಗೆರೆ ತಾಲೂಕಿನಲ್ಲಿ 42 ಲಕ್ಷದ 5 ಕಾಮಗಾರಿ, ಹರಿಹರದಲ್ಲಿ ಒಟ್ಟು 18.00 ಲಕ್ಷ ಅನುದಾನ ನಿಗದಿಯಾಗಿದ್ದು 2 ಮುಂದುವರೆದ ಕಾಮಗಾರಿ, ಚನ್ನಗಿರಿಯಲ್ಲಿ ಒಟ್ಟು 16.00 ಲಕ್ಷದ 3 ಮುಂದುವರೆದ ಕಾಮಗಾರಿ, ನ್ಯಾಮತಿ ತಾಲೂಕಿನಲ್ಲಿ 8 ಲಕ್ಷದಲ್ಲಿ 2 ಮುಂದುವರಿದ ಕಾಮಗಾರಿ, ಜಗಳೂರಿಲ್ಲಿ 8 ಲಕ್ಷದ 2 ಮುಂದುವರಿದ ಕಾಮಗಾರಿ ನಡೆಯುತ್ತಿವೆ ಎಂದು ತಿಳಿಸಿದರು.
ಕಳೆದ ಬಾರಿಗಿಂತ ಈ ಬಾರಿ ಮುಂದುವರಿದ ಕಾಮಗಾರಿಗೆ ಕಡಿಮೆ ಅನುದಾನ ಇರಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹೆಚ್ಚು ಮುಂದುವರೆದ ಕಾಮಗಾರಿಗಳಾಗದಂತೆ ಕ್ರಮ ವಹಿಸಬೇಕು. ಮುಂದುವರಿದ ಎಲ್ಲಾ ಕಾಮಗಾರಿಗಳನ್ನು ಈ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಸದ ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಪಾಲಿಕೆ ಆಯುಕ್ತೆ ರೇಣುಕಾ, ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾ ವ್ಯವಸ್ಥಾಪಕ ರವಿ, ಕಾಮಗಾರಿ ಅನುಷ್ಟಾನಾಧಿಕಾರಿಗಳು ಮತ್ತು ಇಂಜಿನಿಯರ್ ಗಳು ಇದ್ದರು.
......................... ಜನರಿಗೆ ಸಮಸ್ಯೆಯಾಗದಂತೆ ಜಲಸಿರಿ ಕಾಮಗಾರಿ ನಡೆಸಿ* ಮಾರ್ಚ್ 2024ಕ್ಕೆ ಪ್ರಾಯೋಗಿಕ ಹಂತ ಮುಗಿಸಿ: ಸಿದ್ದೇಶ್ವರ
ದಾವಣಗೆರೆ: ಜಲಸಿರಿ ಯೋಜನೆ ಕಾಮಗಾರಿಗಳನ್ನು ಇದೇ ವರ್ಷಾಂತ್ಯಕ್ಕೆ ಪೂರ್ಣಗೊಳಿಸಿ, ಮಾರ್ಚ್ 2024ರ ಒಳಗಾಗಿ ಪ್ರಾಯೋಗಿಕ ಹಂತವನ್ನು ಮುಗಿಸುವಂತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಕಾಲಮಿತಿ ನೀಡಿದ್ದಾರೆ. ನಗರದ ಡಿಸಿ ಕಚೇರಿಯಲ್ಲಿ ಶನಿವಾರ ಜಲಸಿರಿ 24/7 ಯೋಜನೆ ಜಾರಿಗೊಳಿಸುತ್ತಿರುವ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಸೆಂಬರ್ ಅಂತ್ಯದೊಳಗೆ ಜಲಸಿರಿ ಕಾಮಗಾರಿ ಪೂರ್ಣಗೊಂಡಿರಬೇಕು ಎಂದರು.ಅಧಿಕಾರಿಗಳು ಮಾತನಾಡಿ, 3 ಕಡೆ ಸಗಟು ನೀರು ಪೂರೈಕೆ ಜಾಲದ ಕಾಮಗಾರಿ ಬಾಕಿ ಇದೆ. ಹಳೇ ಕುಂದುವಾಡದ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿದೆ. 11 ಸಾವಿರ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಬೇಕಿದೆ. ಜಲಸಿರಿ ಪೂರ್ಣಗೊಳಿಸಿದ ನಂತರ 3 ತಿಂಗಳವರೆಗೆ ಪ್ರಾಯೋಗಿಕ ಅವಧಿ ಇರುತ್ತದೆ. ನಂತರ ಯೋಜನೆಯನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗುವುದು ಎಂದು ಸಂಸದರ ಗಮನಕ್ಕೆ ತಂದರು.
ಸಂಸದ ಸಿದ್ದೇಶ್ವರ ಮಾತನಾಡಿ, ಜಲಸಿರಿ ಕಾಮಗಾರಿಗಾಗಿ ಗುಂಡಿ ತೆಗೆದಾಗ ಸರಿಯಾಗಿ ಮುಚ್ಚುತ್ತಿಲ್ಲ. ಪದೇ ಪದೇ ಗುಂಡಿ ಅಗೆಯಲಾಗುತ್ತಿದೆ. ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಎಚ್ಚರಿಸಿದರು. ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ದಾವಣಗೆರೆ ಮಹಾ ನಗರದಲ್ಲಿ 97 ಸಾವಿರ ನಲ್ಲಿ ಸಂಪರ್ಕ ಕಲ್ಪಿಸಬೇಕಿದೆ. 86 ಸಾವಿರ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದ್ದು, ಇನ್ನೂ 11 ಸಾವಿರ ನಲ್ಲಿಗಳ ಸಂಪರ್ಕ ಬಾಕಿ ಇದೆ ಎಂದು ಸಭೆಗೆ ಮಾಹಿತಿ ನೀಡಿದರು. ಜಲಸಿರಿ ಯೋಜನೆ ಉಪ ಯೋಜನಾ ನಿರ್ದೇಶಕ ವೀರೇಂದ್ರ ಕುಮಾರ, ಕಾರ್ಯಕಾರಿ ಅಭಿಯಂತರ ರವಿಕುಮಾರ, ಪಾಲಿಕೆ ಇಇ ಉದಯ ಕುಮಾರ ಇತರರು ಉಪಸ್ಥಿತರಿದ್ದರು.