ಚಿಕ್ಕಮಗಳೂರು ನಗರದ ನಾಲ್ಕು ಕಡೆಗಳಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆದು ಚಿಕ್ಕಮಗಳೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.ನಗರದ ಬೇಲೂರು ರಸ್ತೆ ಸೇರಿದಂತೆ ವಿವಿಧೆಡೆ ನಾಲ್ಕು ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿಗಳನ್ನು ಆರಂಭಿಸಿ ಮೇ ತಿಂಗಳೊಳಗೆ ನಗರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ವಿದೇಶಗಳಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಸ್ ನಿಲ್ದಾಣಗಳ ಮಾದರಿಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಇವುಗಳಿಗೆ ಅತ್ಯಾಧುನಿಕ ರೀತಿಯಲ್ಲಿ ಗ್ಲಾಸ್ ಅಳವಡಿಸಲಾಗುವುದು. ಇದು ಸರ್ಕಾರದ ಆಸ್ತಿ ಅಲ್ಲ ಸಾರ್ವಜನಿಕರ ಆಸ್ತಿ ಎಂದು ಭಾವಿಸಿ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.ನಗರದ ವಿವಿಧೆಡೆ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ. ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಅವರ ನಿಧಿಯಿಂದ ₹10.92 ಲಕ್ಷ ಹಾಗೂ ತಮ್ಮ ಶಾಸಕರ ನಿಧಿಯಿಂದ ₹5 ಲಕ್ಷ ವನ್ನು ಈ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದರು.
ಹಿರೇಮಗಳೂರು, ಕಲ್ಯಾಣನಗರ, ಕಣಿವೇ ರುದ್ರೇಶ್ವರ ದೇವಸ್ಥಾನ, ಕೋಟೆ ಬಡಾವಣೆಯ ಬೇಲೂರು ರಸ್ತೆಯ ಬಳಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಈ ನಾಲ್ಕು ಕಾಮಗಾರಿಗಳಿಗೆ ಅಗತ್ಯವಾಗಿ ಬೇಕಾಗಿರುವ ಹಣ ಲಭ್ಯವಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದೆಂದು ತಿಳಿಸಿದರು.ನಗರದಲ್ಲಿ ಹಾನಿಯಾಗಿರುವ ರಸ್ತೆಗಳ ದುರಸ್ತಿಗೆ ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು ಅಂಚೆ ಕಚೇರಿ ರಸ್ತೆ, ಒಕ್ಕಲಿಗರ ಸಮುದಾಯ ಭವನದ ರಸ್ತೆ, ಶಂಕರಪುರ 5ನೇ ಕ್ರಾಸ್ ಸೇರಿದಂತೆ ಎಲ್ಲಾ ರಸ್ತೆಗಳನ್ನು ದುರಸ್ತಿಪಡಿಸಲು ಜೈರಾಮ್ ಅವರ ಮನವೊಲಿಸಿ ಅನುದಾನ ತಂದಿರುವ ಜೊತೆಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಚಿಕ್ಕಮಗಳೂರು ನಗರಕ್ಕೆ ಸೀಮಿತವಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.ಗವನಹಳ್ಳಿಯಿಂದ ರಾಂಪುರದವರೆಗೆ ಉತ್ತಮ ಗುಣಮಟ್ಟದ ವಿದ್ಯುತ್ ದೀಪ ಅಳವಡಿಸಲು ಈಗಾಗಲೇ ಡಿಪಿಆರ್ ಮಾಡಲಾಗಿದೆ. ಮುಂದೆ ಬೇಲೂರು ಬಸ್ ನಿಲ್ದಾಣದಿಂದ ಹಿರೇಮಗಳೂರುವರೆಗೆ ಬೀದಿ ದೀಪ ಅಳವಡಿಸಲು ಕ್ರಮವಹಿಸ ಲಾಗುವುದೆಂದು ಹೇಳಿದರು.ನಗರಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ನಾವು ಅಧ್ಯಕ್ಷರಾದ ನಂತರ ಸಿಟಿ ಬಸ್ ನಿಲ್ದಾಣಗಳನ್ನು ನಿರ್ಮಿಸ ಬೇಕೆಂದು ಸಾರ್ವಜನಿಕರಿಂದ ಬಹಳ ಬೇಡಿಕೆ ಬಂದ ಪರಿಣಾಮ ಇಂದು ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಈಡೇರಿಸಿದ್ದಾರೆ ಎಂದರು.ಸಾರ್ವಜನಿಕರು ಈ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ತಮ್ಮ ಆಸ್ತಿ ಎಂಬಂತೆ ಬಳಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು, ಸಾರ್ವಜನಿಕರು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಬಸ್ ನಿಲ್ದಾಣಗಳು ಇಲ್ಲದೆ ತೊಂದರೆಯಾಗುತ್ತಿತ್ತು. ಇಂದು ನಗರದ ನಾಲ್ಕು ಭಾಗಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಸಿಡಿಎ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ತನೂಜ್ ನಾಯ್ಡು, ಗ್ರಾಮಸ್ಥರಾದ ದಯಾನಂದ ನಾಯ್ಡು, ವೆಂಕಟೇಶ್ ನಾಯ್ಡು, ನಗರಸಭೆ ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ಶಾದಬ್, ಆನಂದ, ಸೋಮಣ್ಣ ಹಾಗೂ ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್, ಸಿಡಿಎ ಆಯುಕ್ತರಾದ ನಾಗರತ್ನ ಉಪಸ್ಥಿತರಿದ್ದರು.5 ಕೆಸಿಕೆಎಂ 1ಚಿಕ್ಕಮಗಳೂರು ನಗರದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅವರು ಬುಧವಾರ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು. ಸುಜಾತಾ ಶಿವಕುಮಾರ್, ನಯಾಜ್ ಅಹಮದ್, ಮಂಜೇಗೌಡ, ಬಸವರಾಜ್, ನಾಗರತ್ನ ಇದ್ದರು.