ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಸಮುದಾಯ ಭವನಗಳು ಮಂಗಳ ಕಾರ್ಯದ ಮೂಲಕ ಸಂಬಂಧವನ್ನು ಬೆಸೆದು, ಎಲ್ಲರನ್ನು ಒಗ್ಗೂಡಿಸುವ ಪುಣ್ಯದ ಸ್ಥಳವಾಗಿರುತ್ತವೆ. ಈ ದಿಸೆಯಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿಯೂ ಸಮುದಾಯ ಭವನ ನಿರ್ಮಿಸಿ ಎಲ್ಲ ಸಮುದಾಯ ಜನರ ಹಿತಕಾಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಮಹತ್ಕಾರ್ಯಕ್ಕೆ ತಾಲೂಕಿನ ಎಲ್ಲ ವರ್ಗದ ಜನತೆಯ ಬೆಂಬಲ ಬಹುಮುಖ್ಯ ಕಾರಣವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ತಾಲೂಕಿನ ಗಾಮ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಕುಂಚಿಟಿಗರ ಸಮುದಾಯ ಭವನ, ಶ್ರೀ ಕೆಂಡದಮ್ಮದೇವಿ ನೂತನ ದೇವಸ್ಥಾನ ಕಟ್ಟಡ, ಶ್ರೀ ಆಂಜನೇಯ ಹಿಂದುಳಿದ ವರ್ಗಗಳ ಸಹಕಾರಿ ಸಂಘದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಅಭಿವೃದ್ಧಿಯಿಂದ ತಾಲೂಕು, ನಾಡಿನ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಹೋಬಳಿಯ 300ಕ್ಕೂ ಅಧಿಕ ಕೆರೆಗೆ ನೀರು ಹರಿಸುವ ದಾಖಲೆಯ ಕಾರ್ಯ ಈ ಅವಧಿಯಲ್ಲಿ ನೆರವೇರಿಸಲಾಗಿದೆ. ಗಾಮದ ಕುಂಚಿಟಿಗ ಸಮಾಜದ ಭವನಕ್ಕೆ ₹25 ಲಕ್ಷ ಅನುದಾನ ನೀಡಲಾಗಿದೆ. ಇದರೊಂದಿಗೆ ಗ್ರಾಮದ ಒಕ್ಕಲಿಗ ಸಮುದಾಯ, ವೀರಶೈವ, ನಾಮದೇವ ಸಿಂಪಿ ಸಮಾಜದ ಭವನಕ್ಕೂ ಅನುದಾನ ನೀಡಿದ್ದು, ಈಗಾಗಲೇ ಪೂರ್ಣಗೊಂಡು ಸದುಪಯೋಗವಾಗುತ್ತಿದೆ. ಗ್ರಾಮದ ತುಂಬು ಹೊಂಡ ಕೆರೆ ಅಭಿವೃದ್ಧಿಗೂ ₹1 ಕೋಟಿ ನೀಡಲಾಗಿದೆ. ತಾಲೂಕಿನ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.ರಟ್ಟೀಹಳ್ಳಿ ಕಬ್ಬಿಣಕಂಥೀ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಂಚಿಟಿಗ ಸಮಾಜದ ಅಧ್ಯಕ್ಷ ಪ್ರಕಾಶ್ ದುರುಮಜ್ಜಿ, ತಾಲೂಕು ಸಮಾಜದ ಅಧ್ಯಕ್ಷ ಕೆ.ವಿ. ಲೋಹಿತ್, ಮುಖಂಡ ಬಿ.ಎನ್. ದಯಾನಂದ, ಎಂ.ನಾಗರಾಜ್, ಕೆ.ವಿ.ರುದ್ರಪ್ಪ, ಶ್ರೀ ಆಂಜನೇಯ ಹಿಂದುಳಿದ ವರ್ಗಗಳ ಸಹಕಾರಿ ಸಂಘ ಅಧ್ಯಕ್ಷ ಕೆ.ನಾಗರಾಜ್, ಸಂಘದ ನಿರ್ದೇಶಕರು, ಕೆಂಡದಮ್ಮ ದೇವಸ್ಥಾನ ಸಮಿತಿ ಸದಸ್ಯರು, ಕುಂಚಿಟಿಗ ಸಮಾಜದ ನಿರ್ದೇಶಕರು, ಗ್ರಾಪಂ ಸದಸ್ಯ ಜೆ.ಡಿ.ಪ್ರತಾಪ್, ಆನಂದ ಭದ್ರಾವತಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.
- - - -26ಕೆಎಸ್.ಕೆಪಿ2:ಕಾರ್ಯಕ್ರಮದಲ್ಲಿ ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಗೌರವಿಸಿದರು.