ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ; ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ, ಪರಿಶೀಲನೆ

KannadaprabhaNewsNetwork | Published : May 8, 2025 12:35 AM

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮೇ 5ರಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ವೆಂಕಟ್‌ರಾಜಾ ರಾಜರಾಜೇಶ್ವರಿಯ ಬಡಾವಣೆಗೆ ತೆರಳಿ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮೇ 5 ರಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಗರದ ಉಕ್ಕುಡ ಬಳಿಯ ರಾಜರಾಜೇಶ್ವರಿ ಬಡಾವಣೆಗೆ ತೆರಳಿ ಬುಧವಾರ ವೀಕ್ಷಿಸಿದರು. ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ ಅವರ ಏಕಸದಸ್ಯ ವಿಚಾರಣಾ ಆಯೋಗ ವತಿಯಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಬಗ್ಗೆ ಖುದ್ದು ಪರಿಶೀಲಿಸಿದರು. ಮೊಬೈಲ್ ಅಪ್ಲಿಕೇಷನ್ ಮೂಲಕ ಮಾಹಿತಿ ತುಂಬುವ ಬಗ್ಗೆ ಪರಿಶೀಲಿಸಿದರು. ಸಮೀಕ್ಷೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಮೀಕ್ಷೆ ಅಪ್ಲಿಕೇಷನ್‌ಗೆ ಲಾಗಿನ್ ಆಗುವುದು. ಸಮೀಕ್ಷೆದಾರರ ಮೊಬೈಲ್ ಸಂಖ್ಯೆಗೆ ಒಟಿಪಿ ನಮೂದಿಸಿ ಲಾಗಿನ್ ಆಗುವುದು, ಸಮೀಕ್ಷೆ ಪ್ರಾರಂಭಿಸಿ ಎಂಬ ಟ್ಯಾಗ್‌ನ್ನು ಒಳಗೊಂಡು ಸಮೀಕ್ಷೆಗೆ ಕ್ಲಿಕ್ ಮಾಡುವುದು, ಹಾಗೆಯೇ ಮತದಾರರ ಪಟ್ಟಿಯಲ್ಲಿರುವ ಮನೆಗಳ ಆಧಾರದ ಮೇಲೆ ಸಮೀಕ್ಷೆ ಪ್ರಾರಂಭಿಸುವುದು. ಮನೆಯ ಮುಖ್ಯಸ್ಥರ ಮತದಾರರ ಪಟ್ಟಿಯಲ್ಲಿನ ಕ್ರಮಸಂಖ್ಯೆಯನ್ನು ನಮೂದು ಮಾಡುವುದು, ಪರಿಶಿಷ್ಟ ಜಾತಿಗೆ ಸೇರಿದವರೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವುದು, ನಂತರ ಪರಿಶಿಷ್ಟ ಜಾತಿ ಕುಟುಂಬದವರ ಪಡಿತರ ಚೀಟಿ ಅಥವಾ ಆಧಾರ್ ಸಂಖ್ಯೆ ನಮೂದಿಸಿ ಸಲ್ಲಿಸುವುದು, ಕುಟುಂಬದ ಸದಸ್ಯರ ವಿವರಗಳು, ಸದಸ್ಯರ ಹೆಸರು, ಜನ್ಮ ದಿನಾಂಕ, ಲಿಂಗ ವಿವರವನ್ನು ಸಲ್ಲಿಸುವುದು, ಪ್ರಮಾಣ ಪತ್ರ ನೀಡುವುದು, ಪಡಿತರ ಚೀಟಿ ನಮೂದಿಸಿ ಕುಟುಂಬದ ಡೇಟಾದಲ್ಲಿರುವ ವಿವರವನ್ನು ಸ್ವಯಂ ಚಾಲಿತವಾಗಿ ಗಮನಿಸುವುದು, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದೀರ ಎಂಬ ಬಗ್ಗೆ ಮಾಹಿತಿ ಪಡೆಯುವುದು. ಜಿಲ್ಲಾಧಿಕಾರಿ ವೀಕ್ಷಣೆ:

ಲಿಂಗ, ವಯಸ್ಸು, ಆಧಾರ್ ಕಾರ್ಡ್ ಸಂಖ್ಯೆ, ಮತ್ತಿತರವನ್ನು ಭರ್ತಿ ಮಾಡುವುದು, ಶಿಕ್ಷಣ, ವಿದ್ಯಾಭ್ಯಾಸ, ಅಕ್ಷರಸ್ಥ, ಅನಕ್ಷರಸ್ಥ, ಶಾಲೆ ಬಿಟ್ಟ ತರಗತಿ, ಉದ್ಯೋಗ ಮಾಹಿತಿ, ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ, ಮತ್ತಿತರ ಭರ್ತಿ ಮಾಡುವ ಸಂಬಂಧ ಸ್ಥಳದಲ್ಲಿಯೇ ಜಿಲ್ಲಾಧಿಕಾರಿ ಅವರು ವೀಕ್ಷಿಸಿದರು. ಜಮೀನು, ಸಾಲ ಸಹಾಯಧನ, ಜಾನುವಾರು, ಕೃಷಿ ಸಂಬಂಧಿಸಿದ ಚಟುವಟಿಕೆಗಳು, ಸ್ಥಿರಾಸ್ತಿ ಮತ್ತು ಚರಾಸ್ತಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು, ವಾಸವಿರಲು ಮನೆ, ಕುಡಿಯುವ ನೀರಿನ ಮೂಲ, ಇಂಧನ ಮೂಲ, ಮನೆಯ ಮಾಲೀಕತ್ವದ ಸ್ವರೂಪ, ನಿವೇಶನ, ಶೌಚಾಲಯ ಮಾಹಿತಿ. ಹಾಗೆಯೇ ಸಂಬಂಧಪಟ್ಟ ಕುಟುಂಬದವರಿಂದ ಒಪ್ಪಿಗೆ ಪಡೆಯುವುದು, ಸಮೀಕ್ಷೆಯ ಮಾಹಿತಿ ಒದಗಿಸಿದ ನಂತರ ಮಾಹಿತಿದಾರರಿಗೆ ಅಪ್ಲಿಕೇಶನ್ ಜನರೇಟ್ ಮಾಡುವುದು. ಹೀಗೆ ಸಮೀಕ್ಷೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಖುದ್ದು ಪರಿಶೀಲಿಸಿದರು.

552 ಸಮೀಕ್ಷೆದಾರರ ನಿಯೋಜನೆ:

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲೆಯಲ್ಲಿ 552 ಸಮೀಕ್ಷೆದಾರರನ್ನು ನಿಯೋಜಿಸಲಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 275, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 277, ಮತಗಟ್ಟೆವಾರುನಂತೆ ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುವ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಮೇ 17 ರವರೆಗೆ ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಮೇ, 19 ರಿಂದ 21 ರವರೆಗೆ ಸಮೀಕ್ಷೆದಾರರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ. ಮೇ, 19 ರಿಂದ 23 ರವರೆಗೆ ಸ್ವಯಂ ಘೋಷಣೆ ಆನ್‌ಲೈನ್ ಮೂಲಕ ಮಾಹಿತಿ ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಮೀಕ್ಷೆ ಅವಕಾಶ ಬಳಸಿ:

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಮಾಹಿತಿ ನೀಡಿ ಸರ್ಕಾರ ಪರಿಶಿಷ್ಟ ಜಾತಿಯ ಮೂಲಜಾತಿಗಳಿಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ. ಆ ನಿಟ್ಟಿನಲ್ಲಿ ಪರಿಶಿಷ್ಟ ಸಮುದಾಯದವರು ಈ ಸಮೀಕ್ಷೆ ಅವಕಾಶ ಬಳಸಿಕೊಳ್ಳುವಂತೆ ಎಂದು ಕೋರಿದರು. ಸಮೀಕ್ಷೆ ವೇಳೆಯಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿ, ಶಿಕ್ಷಣ, ಉದ್ಯೋಗ, ಆದಾಯ ಮತ್ತಿತರ ಪ್ರಮುಖ ಮಾಹಿತಿ ಒದಗಿಸುವಂತಾಗಬೇಕು ಎಂದು ಕೋರಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಮಾತನಾಡಿ ಗಣತಿದಾರರಾಗಿ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ವ್ಯವಸ್ಥಿತವಾಗಿ ಗಣತಿ ಕೈಗೊಳ್ಳಲಾಗಿದ್ದು, ಸರ್ಕಾರದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಗಣತಿದಾರರು ಇತರರು ಇದ್ದರು.