ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ನಾಡಿನಾದ್ಯಂತ ಬೇಡಿಕೆಗಳ ಈಡೇರಿಕೆಗಾಗಿ ಅಸಹಕಾರ ರಾಜ್ಯ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿಯನ್ನ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಶಾಖೆಯ ಪದಾಧಿಕಾರಿಗಳು ಮೌನ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಬೇಡಿಕೆಗಳುಳ್ಳ ಹಕ್ಕುತ್ತಾಯ ಪತ್ರವನ್ನು ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ ಮಾತನಾಡಿ, ಪ್ರಕೃತಿ ವಿಕೋಪ ಸೇರಿದಂತೆ ಉತ್ತರ ಕರ್ನಾಟಕದ ಪ್ರವಾಹ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರಿ ನೌಕರರು ದೇಶದಲ್ಲಿಯೇ ಮಾದರಿಯಾಗಿದ್ದಾರೆ. 7ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಕೂಡಲೇ ಜಾರಿಗೊಳಿಸಬೇಕು. ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನ ಮರು ಜಾರಿಗೊಳಿಸಬೇಕು. ಅಲ್ಲದೆ ಎಲ್ಲ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಹಾಗಾಗಿ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ತಿಳಿಸಿದರು.ಸಂಘದ ಕಾರ್ಯದರ್ಶಿ ಸುಬ್ರಮಣ್ಯ, ಖಜಾಂಚಿ ನಾಗರಾಜು, ಗೌರವಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಬಸವನಾಯಕ ಮೀನಾಕ್ಷಿ, ಕಾನೂನು ಸಲಹೆಗಾರ ಚೆಲುವರಾಜು, ಎನ್. ಪಿ. ಎಸ್. ಅಧ್ಯಕ್ಷ ಶ್ರೀಧರ್, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪ್ರ. ಶಾ.ಶಿ. ಅಧ್ಯಕ್ಷ ಟಿ.ಎನ್. ನಾಗೇಂದ್ರ, ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ನಿರ್ದೇಶಕ ಎನ್.ರೇವಣ್ಣ, ಪಿಡಬ್ಲ್ಯೂಡಿ ಮಂಜುನಾಥ್, ಉಪ ತಹಸಿಲ್ದಾರ್ ಮಂಜುಳಾ, ನಿರ್ದೇಶಕ ಸುರೇಶ್, ಕೆ.ಪಿ. ಮಹದೇವಸ್ವಾಮಿ, ಬಿ.ಆರ್.ಪಿ ಪ್ರಸನ್ನ ಇದ್ದರು.
---------------