ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ, ಇಂಗ್ಲೀಷ್ ಭಾಷಾ ಜ್ಞಾನ ಅವಶ್ಯಕ: ಮಧು ಜಿ.ಮಾದೇಗೌಡ

KannadaprabhaNewsNetwork |  
Published : Oct 14, 2026, 01:45 AM IST
12ಕೆಎಂಎನ್ ಡಿ21 | Kannada Prabha

ಸಾರಾಂಶ

ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ವ್ಯಾಸಂಗ ಮಾಡುವ ಕೆಲವು ವಿದ್ಯಾರ್ಥಿಗಳು ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಕಂಪ್ಯೂಟರ್ ಕಲಿಯುವ ಅಗತ್ಯವಿದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಈ ಮನೋಭಾವವನ್ನು ಬದಲಾಯಿಸಿಕೊಂಡು ಯಾವುದೇ ವಿಭಾಗದಲ್ಲಿ ಓದುತ್ತಿದ್ದರೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯ ಎಂಬುದನ್ನು ತಿಳಿಯಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಮತ್ತು ಇಂಗ್ಲಿಷ್ ಭಾಷಾ ಜ್ಞಾನದ ಅವಶ್ಯಕತೆ ಇದೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಇಲ್ಲಿನ ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಕುವೆಂಪು ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ವ್ಯಾಸಂಗ ಮಾಡುವ ಕೆಲವು ವಿದ್ಯಾರ್ಥಿಗಳು ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಕಂಪ್ಯೂಟರ್ ಕಲಿಯುವ ಅಗತ್ಯವಿದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಈ ಮನೋಭಾವವನ್ನು ಬದಲಾಯಿಸಿಕೊಂಡು ಯಾವುದೇ ವಿಭಾಗದಲ್ಲಿ ಓದುತ್ತಿದ್ದರೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯ ಎಂಬುದನ್ನು ತಿಳಿಯಬೇಕು ಎಂದರು.

ಕೆಲವು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಯುವ ಆಸಕ್ತಿ ಇದ್ದರೂ ಪ್ರಯೋಗಾಲಯದಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ಅಭ್ಯಾಸ ಮಾಡಿದ ನಂತರ ಅದನ್ನು ಮುಂದುವರಿಸುವುದಿಲ್ಲ. ಪ್ರಯೋಗಾಲಯದಿಂದ ಹೊರಬಂದ ಬಳಿಕ ಕಂಪ್ಯೂಟರ್ ಅಭ್ಯಾಸಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಇಂತಹ ಪ್ರವೃತ್ತಿಯಿಂದ ಕಂಪ್ಯೂಟರ್ ಜ್ಞಾನವನ್ನು ಪರಿಣಾಮಕಾರಿಯಾಗಿ ಗಳಿಸಲು ಸಾಧ್ಯವಿಲ್ಲ ಎಂದರು.

ಕಂಪ್ಯೂಟರ್ ಕಲಿಯಲು ನಿರ್ದಿಷ್ಟ ಪದವಿ ಅಥವಾ ವಿಭಾಗದ ವಿದ್ಯಾರ್ಥಿಗಳಾಗಿರಬೇಕೆಂಬ ನಿಯಮವಿಲ್ಲ. ಆಸಕ್ತಿ ಮತ್ತು ಅಭ್ಯಾಸವಿದ್ದರೆ ಮೊಬೈಲ್ ಮೂಲಕವೂ ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಬಹುದು. ಕಲಿತದ್ದನ್ನು ನಿರಂತರ ಅಭ್ಯಾಸ ಮಾಡುವ ಜತೆಗೆ ತಂತ್ರಜ್ಞಾನದ ಬಳಕೆಯನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.

ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಅವರ ಭವಿಷ್ಯ ರೂಪಿಸಲು ಮಾಜಿ ಸಂಸದ ಜಿ.ಮಾದೇಗೌಡರು ಭಾರತೀ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಇಂದು ಸಂಸ್ಥೆ ಬೃಹದಾಕಾರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಬದುಕಿಗೆ ಭದ್ರ ಬುನಾದಿ ಹಾಕಿದೆ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಚಂದನ್ ಮಾತನಾಡಿ, ಇಂದಿನ ತಂತ್ರಜ್ಞಾನಾಧಾರಿತ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜ್ಞಾನದ ಜತೆಗೆ ಪ್ರಾಯೋಗಿಕ ಕೌಶಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಕಂಪ್ಯೂಟರ್ ಶಿಕ್ಷಣವು ವಿದ್ಯಾರ್ಥಿಗಳ ಜ್ಞಾನವೃದ್ಧಿ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ಉದ್ಯೋಗ ಪಡೆಯುವ ಅರ್ಹತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಲಭ್ಯವಿರುವ ತಾಂತ್ರಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹೊಸ ಕೌಶಲ್ಯಗಳನ್ನು ಕಲಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಸುಮಿತಾ, ಡಾ.ನೂತನ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಮಾಧಾನ ಬದಿಗಿಟ್ಟು ಲಿಂಬಿಕಾಯಿ ಪರ ಪ್ರಚಾರ: ಕುಬೇರಪ್ಪ
ಗೊಂಬೆಗಳ ಪ್ರದರ್ಶನ ಸಂಸ್ಕೃತಿ, ಸಂಸ್ಕಾರಗಳ ಭಾವನಾತ್ಮಕ ಬೆಸುಗೆ: ಶಕುಂತಲಾ ಆನಂದ್