ಮಳೆಗಾಲದಲ್ಲಿ ಹೆದ್ದಾರಿ ಸಂಚಾರಕ್ಕೆ ಆತಂಕ

KannadaprabhaNewsNetwork | Published : Jun 12, 2024 12:32 AM

ಸಾರಾಂಶ

ಎರಡು ದಿನದ ಹಿಂದೆ ಕಾರವಾರದಲ್ಲಿ ನಿರ್ಮಿಸಲಾದ ಎರಡೂ ಸುರಂಗದ ಮೇಲಿನ ಗುಡ್ಡದಿಂದ ಕಲ್ಲುಗಳು ರಸ್ತೆಗೆ ಉರುಳಿದೆ. ಆ ವೇಳೆ ಯಾವುದೇ ವಾಹನ ಸಂಚರಿಸದ ಕಾರಣ ಭಾರಿ ಅನಾಹುತ ತಪ್ಪಿದೆ.

ಕಾರವಾರ: ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಅಸಮರ್ಪಕ ಕೆಲಸದಿಂದ ರಾಷ್ಟ್ರೀಯ ಹೆದ್ದಾರಿ ೬೬ರ ಗುಂಟ ಸಂಚಾರಕ್ಕೆ ವಾಹನ ಸವಾರರು ಆತಂಕ ಪಡುವಂತಾಗಿದೆ.

ಕಾರವಾರ- ಗೋವಾ ಗಡಿಯಿಂದ ಭಟ್ಕಳ- ಕುಂದಾಪುರ ಗಡಿಯವರೆಗೆ ಉತ್ತರ ಕನ್ನಡದ ಕರಾವಳಿಯ ಭಾಗದ ೫ ತಾಲೂಕುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರ ಕಾಮಗಾರಿ ಕಳೆದ ೧೧ ವರ್ಷಗಳಿಂದ ನಡೆಯುತ್ತಿದೆ. ಎಲ್ಲ ತಾಲೂಕಿನಲ್ಲೂ ಒಂದಿಲ್ಲೊಂದು ಕಡೆ ಅರೆಬರೆಯಾಗಿದ್ದು, ಗುಡ್ಡ ಕುಸಿತ, ಕಲ್ಲು ಬೀಳುವುದು, ರಸ್ತೆಯ ಮೇಲೆ ನೀರು ನಿಂತು ಕೆರೆಯಂತಾಗುವುದು ಇತ್ಯಾದಿ ಸಮಸ್ಯೆಗಳು ಪ್ರತಿ ಮಳೆಯಾಗದಲ್ಲೂ ಆಗುತ್ತಿದೆ. ಇದರಿಂದ ಮಳೆ ಬೀಳಲು ಆರಂಭಿಸಿದರೆ ಹೆದ್ದಾರಿ ಸಂಚಾರವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಆತಂಕದಿಂದಲೇ ಸವಾರರು ವಾಹನ ಚಲಾಯಿಸುವಂತಾಗಿದೆ. ಹೆದ್ದಾರಿಯುದ್ದಕ್ಕೂ ಒಮ್ಮೆಲೆ ಎದುರಾಗುವ ತಿರುವುಗಳು, ಸರಿಯಾದ ಸೂಚನಾ ಫಲಕಗಳನ್ನು ಅಳವಡಿಕೆ ಮಾಡದ ಕಾರಣ, ಬೀದಿದೀಪದ ವ್ಯವಸ್ಥೆ ಸರಿಯಾಗಿಲ್ಲದೇ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಅವರ್ಸಾ, ಮಾದನಗೇರಿ, ದಿವಗಿ ಅಪಘಾತಗಳ ಹಾಟ್‌ಸ್ಪಾಟ್‌ ಆಗಿವೆ.

ಕಾರವಾರದಿಂದ ಭಟ್ಕಳದವರೆಗಿನ ಹೆದ್ದಾರಿಯನ್ನು ಚತುಷ್ಪಥವಾಗಿ ನಿರ್ಮಾಣ ಮಾಡುವ ಕಾಮಗಾರಿ ಆರಂಭವಾಗಿ ೧೧ ವರ್ಷ ಉರುಳಿದ್ದು, ಗುತ್ತಿಗೆ ಪಡೆದ ಐಆರ್‌ಬಿ ಪೂರ್ಣಪ್ರಮಾಣದಲ್ಲಿ ಕೆಲಸ ಮುಗಿಸಿಲ್ಲ. ಎಲ್ಲ ತಾಲೂಕಿನಲ್ಲೂ ಒಂದಿಲ್ಲೊಂದು ಕಡೆ ಅರೆಬರೆ ಕಾಮಗಾರಿ ನಡೆಸಿದೆ. ಕಳೆದ ಕೆಲವು ತಿಂಗಳಿನಿಂದ ಸಂಪೂರ್ಣವಾಗಿ ಕಾಮಗಾರಿಯನ್ನೇ ಸ್ಥಗಿತ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಕಾಮಗಾರಿ ಪೂರ್ಣಗೊಳಿಸುವಂತೆ, ಸರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಾ ಕಾಮಗಾರಿಯ ವೇಗ ಹೆಚ್ಚಿಸುವ ಬಗ್ಗೆ, ಇಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ.

ಎರಡು ದಿನದ ಹಿಂದೆ ಕಾರವಾರದಲ್ಲಿ ನಿರ್ಮಿಸಲಾದ ಎರಡೂ ಸುರಂಗದ ಮೇಲಿನ ಗುಡ್ಡದಿಂದ ಕಲ್ಲುಗಳು ರಸ್ತೆಗೆ ಉರುಳಿದೆ. ಆ ವೇಳೆ ಯಾವುದೇ ವಾಹನ ಸಂಚರಿಸದ ಕಾರಣ ಭಾರಿ ಅನಾಹುತ ತಪ್ಪಿದೆ. ೨೦೧೭ರಲ್ಲಿ ಕುಮಟಾ ತಾಲೂಕಿನ ತಂಡ್ರಾಕುಳಿಯಲ್ಲಿ ಗುಡ್ಡ ಕುಸಿದು ಮೂರು ಮಕ್ಕಳು ಸೇರಿ ನಾಲ್ಕು ಜನರು ಜೀವಂತ ಸಮಾಧಿಯಾಗಿದ್ದರು. ೨೦೨೩ರಲ್ಲಿ ಇದೇ ಊರಿನಲ್ಲಿ ಬಂಡೆಯೊಂದು ಉರುಳಿ ಮನೆಗೆ ಅಪ್ಪಳಿಸಿತ್ತು. ಅದೃಷ್ಟವಶಾತ್ ಯಾವುದೇ ಸಾವು ನೋವು ಆಗಿರಲಿಲ್ಲ. ಮಳೆಗಾಲ ಆರಂಭವಾಯಿತೆಂದರೆ ವಾಹನ ಸವಾರರು ಜೀವಭಯದಿಂದಲೇ ಸಾಗಬೇಕಿದ್ದು, ಜಿಲ್ಲಾಡಳಿತವಾದರೂ ಹೆದ್ದಾರಿಯಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಕ್ರಮವಹಿಸಬೇಕಿದೆ.

Share this article