ಹಾವೇರಿ: ಎರಡು ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬದುಕುಳಿದಿದ್ದೇ ಪವಾಡವಾಗಿದ್ದು, ಕ್ಷೇತ್ರದಲ್ಲಿ ಎರಡು ತಿಂಗಳು ನನ್ನ ಅನುಪಸ್ಥಿತಿಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗದಂತೆ ಕಾಳಜಿ ವಹಿಸಲಾಗಿದೆ. ವಿವಿಧ ಕಾಮಗಾರಿಗಳಿಗೆ ಹತ್ತಾರು ಕೋಟಿ ರು. ಅನುದಾನ ತರಲಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ಇನ್ನೂ ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದ್ದರೂ ಗುಣಮುಖರಾಗುವ ಆತ್ಮವಿಶ್ವಾಸ ಇದೆ. ಆರಂಭದಲ್ಲಿ ಸಣ್ಣ ಪ್ರಮಾಣದ ಗಾಯ ಎಂದುಕೊಂಡಿದ್ದೆವು. ಆದರೆ, ಗಂಭೀರವಾಗಿಯೇ ಸಮಸ್ಯೆ ಆಗಿತ್ತು. ಈ ವೇಳೆ ಕೆಲವರು ಊಹಾಪೋಹ ಹಬ್ಬಿಸಿದ್ದರು. ಆದರೆ ದೇವರ ದಯೆಯಿಂದ ಚೇತರಿಸಿಕೊಂಡಿದ್ದೇನೆ ಎಂದರು.ಕ್ಷೇತ್ರದಲ್ಲಿ ನಾನು ಇಲ್ಲದಿದ್ದರೂ ಸರ್ಕಾರದಿಂದ ಬರಬೇಕಾದ ಅನುದಾನ ಮಂಜೂರಾತಿ ಮಾಡಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿಗಾಗಿ ₹10 ಕೋಟಿ ಅನುದಾನ ಮಂಜೂರಾಗಿದ್ದು, ಅಧಿಕಾರಿಗಳಿಗೆ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 3 ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ₹12 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ತಾಲೂಕಿನ ಕರ್ಜಗಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರವನ್ನು ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಲೋಕಾರ್ಪಣೆ ಮಾಡಿ ರೈತರ ಅನುಕೂಲಕ್ಕೆ ಒದಗಿಸಲಾಗುವುದು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ವಿದ್ಯಾರ್ಥಿನಿಲಯಗಳ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ವಸತಿನಿಲಯಗಳ ಸಮಸ್ಯೆ ಹೆಚ್ಚಾಗಿದ್ದು, ಇದನ್ನರಿತು 3 ಹೊಸ ವಸತಿನಿಲಯಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದರು.ಲೋಕೋಪಯೋಗಿ ಇಲಾಖೆಯ ವತಿಯಿಂದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ₹6.50 ಕೋಟಿ ಮೊತ್ತದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆ ಮಾಡಿ ವಿದ್ಯಾರ್ಥಿಗಳ ಅನುಕೂಲತೆಗೆ ಒದಗಿಸಲಾಗುವುದು ಎಂದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಭೂವೀರಾಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಕ್ಕೂರನಲ್ಲಿ ವಸತಿ ಗೃಹಗಳ ನಿರ್ಮಾಣ ಹಾಗೂ ಕನವಳ್ಳಿಯಲ್ಲಿ ಮೌಲಾನ ಆಜಾದ್ ಶಾಲೆ ನೂತನ ಕಟ್ಟಡ ಮತ್ತು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ನೂತನ ಕಟ್ಟಡಗಳಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.ನೆಲೋಗಲ್ಲ ಗುಡ್ಡದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ವನ್ನು ₹25 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ತಾಂತ್ರಿಕ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇಲ್ಲಿಗೆ ಹೋಗುವ ರಸ್ತೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಅಲ್ಲಿಯ ನಿವಾಸಿಗಳಿಗೆ ಸೂರು ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದರು.ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ಆಯೋಜಿಸಿರುವ ಸಮರ್ಪಣೆ ಸಂಕಲ್ಪ ಶೀರ್ಷಿಕೆಯಡಿಯಲ್ಲಿ ಸರ್ಕಾರದ ಎರಡು ವರ್ಷಗಳ ಜನಪರ ಸಾಧನೆಯ ಕಾರ್ಯಕ್ರಕ್ಕೆ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಒಟ್ಟು 20 ಬಸ್‌ಗಳಿಂದ ಒಟ್ಟು 907 ಫಲನುಭವಿಗಳು ಹಕ್ಕುಪತ್ರ ಪಡೆಯಲಿದ್ದು, ಇದಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದರು.ಬೇಸಿಗೆ ದಿನಗಳಲ್ಲಿ ಹಾವೇರಿ ನಗರಕ್ಕೆ ಎದುರಾಗುತ್ತಿರುವ ಕುಡಿಯುವ ನೀರಿಗೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಂಚಾರಗಟ್ಟಿ ಬಳಿ ₹150 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಲ್ಲಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಈಗಾಗಲೇ ₹50 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ನಗರದ ಅಕ್ಕಮಹಾದೇವಿ ಹೊಂಡವನ್ನು ₹75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಾವೇರಿ ನಗರದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೇ 21ರಂದು ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಎಂ.ಎಂ. ಮೈದೂರ, ಶ್ರೀಧರ ದೊಡ್ಡಮನಿ, ಪರಮೇಶ ಶಿವಣ್ಣನವರ, ಆನಂದಪ್ಪ ಅಕ್ಕೂರ, ಎಸ್.ಎಸ್. ಖಾಜಿ, ಶಿವಕುಮಾರ ತಾವರಗಿ ಇತರರು ಇದ್ದರು.
ಸಚಿವ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು: ರುದ್ರಪ್ಪ ಲಮಾಣಿಹಾವೇರಿ: ಪ್ರತಿ ಚುನಾವಣೆ ಸಂದರ್ಭದಲ್ಲಿ ಬಂಜಾರ ಸಮುದಾಯ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದು, ಈ ಸಮುದಾಯದ ಪ್ರತಿನಿಧಿಯಾಗಿ ನಾನಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಪರಿಗಣಿಸುವ ಭರವಸೆ ಇದೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಸಂಪುಟ ರಚನೆ ವೇಳೆಯೇ ಸಚಿವನಾಗಬೇಕಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಹೆಸರು ಬದಲಿಸಲಾಯಿತು. ಪಕ್ಷದ ನಾಯಕರು ನನ್ನ ಮನವೊಲಿಸಿ ಉಪಸಭಾಧ್ಯಕ್ಷ ಸ್ಥಾನ ನೀಡಿದರು. ಒಂದುವೇಳೆ ಸಚಿವ ಸಂಪುಟ ವಿಸ್ತರಣೆಯಾದರೆ ನನ್ನನ್ನು ಪರಿಗಣಿಸಿ ಎಂದು ಹೇಳಿದ್ದೇನೆ. ಅಂತಿಮ ನಿರ್ಣಯವನ್ನು ಹೈಕಮಾಂಡ್ ಕೈಗೊಳ್ಳುತ್ತದೆ ಎಂದರು.