ಕನ್ನಡಪ್ರಭ ವಾರ್ತೆ ಮದ್ದೂರು
ಸಾಮಾಜಿಕ ಪಿಡುಗು ಆಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರ್ಕಾರ, ಸರ್ಕಾರೇತರ ಮತ್ತು ಸಾರ್ವಜನಿಕರ ಸಂಘಟಿತ ಪ್ರಯತ್ನ ಅತ್ಯಗತ್ಯವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಮಂಗಳವಾರ ಹೇಳಿದರು.ಪಟ್ಟಣದ ಲೀಲಾವತಿ ಬಡಾವಣೆಯ ಜವಾಹರ್ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಹಾಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಮಕ್ಕಳಿಗೆ ಕೊಟ್ಟ ಸಂವಿಧಾನದ ಹಕ್ಕಾಗಿದೆ. ಪೋಷಕರು ಅವರಿಗೆ ಶಿಕ್ಷಣ ದೊರಕಿಸಿ ಕೊಡುವುದನ್ನು ಬಿಟ್ಟು ಕೆಲಸದಲ್ಲಿ ತೊಡಗಿಸಿಕೊಂಡರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಕ್ಕಳು ತಮ್ಮ ಬಾಲ್ಯವನ್ನು ಆಟ, ಪಾಠ ಶಿಕ್ಷಣದಿಂದ ಕಳೆಯಬೇಕು. 18 ವರ್ಷ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು. ಪೋಷಕರು ವಯೋ ಸಹಜವಾಗಿ ಮಕ್ಕಳು ಆಟವಾಡಲು, ಶಿಕ್ಷಣ ಪಡೆಯಲು ಸಹಕರಿಸಬೇಕು. ಅದನ್ನು ಬಿಟ್ಟು ಬಡತನದ ಕಾರಣದಿಂದ ಅವರನ್ನು ಕೆಲಸಕ್ಕೆ ಹಾಕಿದರೆ ಅಂತಹ ಪೋಷಕರು ಕಾನೂನಿನ ಕುಣಿಕೆಗೆ ಸಿಲುಕುವುದು ಖಚಿತ ಎಂದು ಕಿವಿಮಾತು ಹೇಳಿದರು.ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪ್ರಮಾಣವಚನ ಬೋಧಿಸಿದ ದ್ವಿತೀಯ ಅಪರ ಸಿವಿಲ್ ನ್ಯಾಯಾಧೀಶ ಎಸ್.ಪಿ.ಕಿರಣ್ ಮಾತನಾಡಿ, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಅನ್ವಯ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷ ಒಳಗಿನ ಕಿಶೋರರನ್ನು ಅಪಾಯಕಾರಿ ಉದ್ಯಮಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಮತ್ತು ವಾರೆಂಟ್ ರಹಿತ ಅಪರಾಧವಾಗಿದೆ ಎಂದರು.
ಬಾಲ ಕಾರ್ಮಿಕ ಪದ್ಧತಿಯನ್ನು ಪ್ರೋತ್ಸಾಹಿಸುವ ಪೋಷಕರಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಬಾಲ್ಯಾವಸ್ಥೆಯ ಮಕ್ಕಳನ್ನು ಉದ್ಯೋಗಕ್ಕೆ ಕಳಿಸುವ ಮುನ್ನ ಪೋಷಕರು ಎಚ್ಚರಿಕೆ ವಹಿಸಬೇಕು ಎಂದರು.ಕಾರ್ಮಿಕ ನಿರೀಕ್ಷಕ ಕೃಷ್ಣಪ್ಪ ಸಂಪನ್ಮೂಲ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಂ.ಹೆಚ್.ಚನ್ನೇಗೌಡ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಿ. ಅಪೂರ್ವ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ವಕೀಲ ರಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ವಕೀಲ ಮಹೇಶ್, ಜವಾಹರ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಚ್. ಎಂ.ಅನಿತಾ ಪಾಲ್ಗೊಂಡಿದ್ದರು.