ಕನ್ನಡಪ್ರಭ ವಾರ್ತೆ ಯಾದಗಿರಿ
ಹುಬ್ಬಳ್ಳಿಯ ನೇಹಾ ಹಿರೇಮಠಳನ್ನು ಬರ್ಬರವಾಗಿ ಹತ್ಯೆ ಪ್ರಕರಣ ಖಂಡಿಸಿ, ಯಾದಗಿರಿ ಸೇರಿದಂತೆ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ, ಸೈದಾಪುರ ಮುಂತಾದೆಡೆ ಪ್ರತಿಭಟನೆಗಳು ನಡೆದಿವೆ.ಕೊಲೆಗಾರನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ ಸಂಘಟನೆಗಳು, ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ನಿಂತಿದ್ದು, ಇಂತಹ ಕುಮ್ಮಕ್ಕುಗಳಿಗೆ ಪ್ರೇರಣೆ ನೀಡಿದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಯಾದಗಿರಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬೇಡ ಜಂಗಮ ಸಮಾಜ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಲಾಯಿತು. ಪ್ರಕರಣದ ಸೂಕ್ತ ತನಿಖೆ ನಡೆಸಿ, ಕೊಲೆಗಾರನಿಗೆ ಕಠಿಣ ಶಿಕ್ಷೆ ಆಗುವಲ್ಲಿ ಕಾರ್ಯನಿರ್ವಹಿಸಬೇಕಾದ ಆಡಳಿತ ಸರ್ಕಾರವೇ ಆರೋಪಿಯ ಪರ ಮೃದು ಧೋರಣೆ ತಾಳಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ದಾಸಬಾಳ ಮಠದ ಶ್ರೀ ವೀರೇಶ್ವರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿಎಂ ಹಾಗೂ ಗೃಹ ಸಚಿವರು ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆ ಶೋಭೆ ತರುವಂತದ್ದಲ್ಲ.ಪೋಷಕರು ತನ್ನ ಹೆಣ್ಣು ಮಕ್ಕಳ ಜೊತೆ ಹೊರ ಹೋಗಲು ಆಗುತ್ತಿಲ್ಲ ಎಂದರು.
ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಸಿಎಂ ಹಾಗೂ ಗೃಹ ಸಚಿವರು ಉಡಾಫೆ ಹೇಳಿಕೆ ನೀಡಿ ತಮ್ಮ ಬೇಜವಾಬ್ದಾರಿತನ ತೊರಿದ್ದಾರೆ. ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಆರೋಪಿತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕಾನೂನು ಸುವ್ಯವಸ್ಥೆ ರೂಪಿಸಬೇಕು. ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಕಠಿಣ ಶಿಕ್ಷೆ ನೀಡುವ ಕಾಯ್ದೆ ಸರಕಾರ ಜಾರಿಗೆ ತರಬೇಕು ಎಂದರು.ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರು, ಬೇಡ ಜಂಗಮ ಸಮಾಜದ ಮುಖಂಡ ಚೆನ್ನವೀರಯ್ಯಸ್ವಾಮಿ ಕೌಳೂರು, ವೀರಶೈವ ಸಮಾಜದ ಮುಖಂಡರಾದ ಡಾ. ಸಿದ್ದಪ್ಪ ಹೊಟ್ಟಿ, ಶರಣಗೌಡ ಬಾಡಿಯಾಳ, ಅವಿನಾಶ ಜಗನ್ನಾಥ, ಮಲ್ಲಣ್ಣಗೌಡ ಹಳಿಮನಿ ಕೌಳೂರು, ಚೆನ್ನುಗೌಡ ಬಿಳ್ಹಾರ, ಮಹೇಶ್ ಆನೆಗುಂದಿ, ಬಸವರಾಜ ಸೊನ್ನದ, ಅನ್ನಪೂರ್ಣ ಜವಳಿ, ಅಯ್ಯಣ್ಣ ಹುಂಡೇಕಾರ, ವೀರಭದ್ರಯ್ಯ ಚೌಕಿಮಠ, ಮಹೇಶಕುಮಾರ ಹಿರೇಮಠ, ಪ್ರಭುಲಿಂಗಯ್ಯ ಹಿರೇಮಠ, ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಗುರುಸಣಗಿ, ಮಲ್ಲು ಗುಡಿಮಠ, ಸಿದ್ದರಾಮಯ್ಯಸ್ವಾಮಿ ಹೊಸಳ್ಳಿ, ಗೌರಿಶಂಕರ ಹಿರೇಮಠ, ಶ್ರೀಕಾಂತ್‌ಸ್ವಾಮಿ ಸೇರಿದಂತೆ ಇನ್ನಿತರರಿದ್ದರು.ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ಯಾದಗಿರಿ: ನೇಹಾ ಹಿರೇಮಠ ಕಗ್ಗೊಲೆ ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ, ಜಿಹಾದಿ ಮನಸ್ಸಿನ ಫಯಾಜ್‌ನನ್ನು ಸಾರ್ವಜನಿಕವಾಗಿ ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಸಮೀಪದ ಸೈದಾಪುರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ರೈಲು ನಿಲ್ದಾಣದಿಂದ ಬಸವೇಶ್ವರ ವೃತ್ತ, ಕನಕ ವೃತ್ತ, ಬಸ್ ನಿಲ್ದಾಣದ ಮೂಲಕ ಪ್ರತಿಭಟನೆ ರ‍್ಯಾಲಿ ಕೈಗೊಂಡು ಮೃತಳ ಹತ್ಯೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಉಪ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದರು.
ವೇದಿಕೆಯ ಮುಖಂಡ ನಿತಿನ್ ತಿವಾರಿ ಮಾತನಾಡಿ, ಹತ್ಯೆ ಮಾಡಿದ ಕೊಲೆಗಾರ ಫಯಾಜ್ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ನಮ್ಮ ದುರಂತ. ಲವ್ ಜಿಹಾದ್ ಹೆಸರಲ್ಲಿ ಕೊಲೆ ಮಾಡಲಾಗಿರುವ ಘಟನೆ ಕಣ್ಣಿಗೆ ಕಂಡರು ಕೂಡ ತುಷ್ಠೀಕರಣ ನೀತಿಯಿಂದಾಗಿ ಆರೋಪಿ ರಕ್ಷಣಗೆ ಮುಂದಾಗಿರುವುದು ಖಂಡನೀಯ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ಒಳಪಡಿಸಿ ಫಯಾಜ್‌ನನ್ನು ಶೀಘ್ರ ವಿಚಾರಣೆ ನಡೆಸಿ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.ಶ್ರದ್ಧಾಂಜಲಿ: ಸೈದಾಪುರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ಮಧ್ಯೆ ಕುಳಿತುಕೊಂಡು ನೇಹಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ನ್ಯಾಯ ಕೊಡಿಸಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.