ಕೇಂದ್ರ ಸರ್ಕಾರದಿಂದ ಹಿಂದಿ ಭಾಷೆ ಹೇರಿಕೆಗೆ ಖಂಡಿಸಿ ಕರವೇ ಪ್ರತಿಭಟನೆ

KannadaprabhaNewsNetwork |  
Published : Sep 15, 2024, 01:49 AM IST
೧೪ಎಚ್‌ವಿಆರ್೧- | Kannada Prabha

ಸಾರಾಂಶ

ಕೇಂದ್ರ ಸರ್ಕಾರದಿಂದ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ ಖಂಡಿಸಿ, ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲ ೨೨ ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಸಾರ್ವಭೌಮತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಶನಿವಾರ ನಗರದ ಕೆಇಬಿ ಸಮೀಪದ ಸಂಗೂರ ಕರಿಯಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಹಾವೇರಿ: ಕೇಂದ್ರ ಸರ್ಕಾರದಿಂದ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ ಖಂಡಿಸಿ, ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲ ೨೨ ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಸಾರ್ವಭೌಮತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಶನಿವಾರ ನಗರದ ಕೆಇಬಿ ಸಮೀಪದ ಸಂಗೂರ ಕರಿಯಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ೨೨ ಭಾಷೆಗಳೂ ರಾಷ್ಟ್ರಭಾಷೆಗಳೇ ಆಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ನೂರಾರು ಜೀವಂತ ಭಾಷೆಗಳೂ ನಮ್ಮ ನಡುವೆ ಇವೆ. ಈ ಎಲ್ಲ ಭಾಷೆಗಳೂ ಉಳಿದು, ಬೆಳೆಯುವ ಎಲ್ಲ ಹಕ್ಕನ್ನೂ ಒಳಗೊಂಡಿವೆ. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ಸಂವಿಧಾನ ಕರಡು ರಚನೆಯ ಸಂದರ್ಭದಲ್ಲೇ ತಿರಸ್ಕರಿಸಲಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾಷೆ, ಅದಕ್ಕೆ ಯಾವ ಹೆಚ್ಚುಗಾರಿಕೆಯೂ ಇಲ್ಲ, ಇರಬೇಕಾಗೂ ಇಲ್ಲ ಎಂದರು.ರಾಜ್ಯಭಾಷಾ ಕಾಯ್ದೆಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಿಂದಿಯನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಕಾರ್ಯವನ್ನು ಮಾಡುತ್ತ ಬಂದಿದೆ. ಹಿಂದಿ ರಾಜ್ಯಗಳ ಜನರನ್ನು ಉದ್ಯೋಗದ ನೆಪದಲ್ಲಿ ಹಿಂದಿಯೇತರ ರಾಜ್ಯಗಳಿಗೆ ವಲಸೆ ಕಳುಹಿಸುವ ಮತ್ತು ವಲಸೆ ಹೋದ ಹಿಂದಿಯನ್ನರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ದೂರಿದರು. ಕೇಂದ್ರ ಸರ್ಕಾರದ ಅಡಿಯಲ್ಲಿನ ಉದ್ಯಮಗಳು, ರೈಲ್ವೆ ಇಲಾಖೆ, ಬ್ಯಾಂಕಿಂಗ್ ವಲಯ ಹಾಗೂ ಸೇನಾ ನೇಮಕಾತಿಗಳ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಆಡುವ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕ ಇತ್ಯಾದಿ ಕಾರ್ಯಕ್ರಮಗಳನ್ನು ನಮ್ಮ ತೆರಿಗೆ ಹಣದಲ್ಲಿ ಸಂಘಟಿಸಿ, ಕೋಟ್ಯಂತರ ರು. ಖರ್ಚು ಮಾಡಿ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳಲ್ಲಿ ಪಸರಿಸುವ ಕೆಲಸಕ್ಕೆ ಬಳಸುತ್ತಿದೆ ಎಂದು ಆರೋಪಿಸಿದರು. ಈ ಕೂಡಲೇ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಎಲ್ಲ ಬಗೆಯ ಪತ್ರ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು. ಅಂತಾರಾಜ್ಯ ವ್ಯವಹಾರಗಳು ಮತ್ತು ಕೇಂದ್ರ ಸರ್ಕಾರದೊಂದಿಗಿನ ವ್ಯವಹಾರಗಳೂ ಸಹ ಕನ್ನಡ ನುಡಿಯಲ್ಲೇ ಆಗಬೇಕು. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ. ನಮ್ಮ ಶಾಲಾಪಠ್ಯಕ್ರಮಗಳಿಂದ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ಮುಖಂಡರಾದ ವಿಜಯಲಕ್ಷ್ಮಿ ಗುಡಮಿ, ಹಾಲೇಶ ಹಾಲಣ್ಣನವರ, ಮಾರುತಿ ಪೂಜಾರ, ಸಿಕಂದರ ವಾಲಿಕಾರ, ಬಿ.ಎಚ್. ಬಣಕಾರ, ಹಸನಸಾಬ ಹತ್ತಿಮತ್ತೂರ, ಅಶೋಕ ಹೊಸಮನಿ ಅಬ್ಬು ಕೊಡಮಗ್ಗಿ, ಶಿವಾನಂದ ಪೂಜಾರ, ಬಸವರಾಜ ಅರಳಿ, ಕಾಳಪ್ಪ ಬಡಿಗೇರ, ಸತ್ಯವತಿ ಕಡೇರ, ಲಕ್ಷ್ಮಿಶ ಮೇಲ್ಮುರಿ, ಬಸಲಿಂಗಪ್ಪ ನರಗುಂದ, ಇಮಾಮಸಾಬ ತಿಮ್ಮಾಪೂರ, ಬಸವರಾಜ ಕಡೆಮನಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!