ಶಿಕಾರಿಪುರ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲ ಅಧಿಕಾರಿಗಳು ದೇವಸ್ಥಾನಗಳಿಗೆ ಸಂಬಂಧಿಸಿದ ಕೋಟ್ಯಂತರ ಹಣವನ್ನು ಭ್ರಷ್ಟಾಚಾರ ಮಾಡಿರುವುದನ್ನು ಖಂಡಿಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ಮಂದಿರ ಮಹಾಸಂಘ, ವಿವಿಧ ಹಿಂದೂ ಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಧಾರ್ಮಿಕ ದತ್ತಿ ಇಲಾಖೆಯ ಸಚಿವರಿಗೆ ಇಲ್ಲಿನ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಪ್ರಕರಣದ ತನಿಖೆ ಮಾಡಲು ವಿಶೇಷ ತನಿಖಾ ದಳವನ್ನು ನೇಮಿಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತುಗೊಳಿಸಿ, ಬಂಧಿಸುವ ಮೂಲಕ ಶಿಕ್ಷೆಯಾಗುವಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳಲ್ಲೂ ಈ ರೀತಿಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಅಧಿಕಾರಿಗಳಿಂದ ಇಂತಹ ಭ್ರಷ್ಟಾಚಾರಗಳು ನಡೆಯುತ್ತಿವೆಯೇ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಧಿಯ ದುರ್ಬಳಕೆ ತಡೆಯಲು ಕಠಿಣ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು. ದೇವಾಲಯಗಳ ನಿಧಿಗಳು ಸರಿಯಾದ ರೀತಿ ನಿರ್ವಹಣೆ ಮಾಡಲು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಹಣ ಕೇವಲ ದೇವಸ್ಥಾನಗಳ ಅಭಿವೃದ್ಧಿ, ಧರ್ಮಪ್ರಸಾರ, ದೇವಸ್ಥಾನಗಳ ಮೂಲಭೂತ ಸೌಕರ್ಯಗಳಿಗಾಗಿ ವಿನಿಯೋಗವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ಸದಸ್ಯ ವಿ.ರಾಮಣ್ಣ, ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಎಸ್.ವೆಂಕಟೇಶ್, ಶ್ರೀ ತುಳಜಾಭವಾನಿ ದೇವಸ್ಥಾನದ ಅಧ್ಯಕ್ಷ ಅರ್ಜುನ್ ರಾವ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಿ.ಪಿ.ನಾರಾಯಣ್ ರಾವ್, ಸವಿತ ಯುವಕ ಸಂಘದ ಅಧ್ಯಕ್ಷ ಎಸ್.ಮಧುಕುಮಾರ್, ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ, ಈರೇಶ್, ವಿ.ರಘು, ಎಂ.ಎನ್.ಶ್ರೀನಿವಾಸ್, ಎಂ.ವಿಜಯ ಭಾಸ್ಕರ್, ಆರ್.ಬಾಲರಾಜ್, ಭಾಸ್ಕರ್, ಅಜಿತ್ ಮತ್ತಿತರರು ಹಾಜರಿದ್ದರು.