ಬೌದ್ಧ ಭಿಕ್ಕುಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ

KannadaprabhaNewsNetwork | Published : Mar 12, 2025 12:52 AM

ಸಾರಾಂಶ

ಬಿಹಾರದ ಮಹಾಬೋಧಿ ಮಹಾ ವಿಹಾರದ ಮುಕ್ತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದ ಬೌದ್ಧ ಭಿಕ್ಕುಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಚಾಮರಾಜನಗರದಲ್ಲಿ ಬೌದ್ಧ ಸಂಘ ಸಂಸ್ಥೆಗಳು ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಿಹಾರದ ಮಹಾಬೋಧಿ ಮಹಾ ವಿಹಾರದ ಮುಕ್ತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದ ಬೌದ್ಧ ಭಿಕ್ಕುಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಗರದಲ್ಲಿ ಬೌದ್ಧ ಸಂಘ ಸಂಸ್ಥೆಗಳು ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿಹಾರ ಸರ್ಕಾರ ಹಾಗೂ ಮುಖ್ಯಮಂತ್ರಿ ನಿತೀಶ್‌ಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಮಹಾ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ತಿ.ನರಸೀಪುರದ ನಳಂದ ಬೌದ್ಧ ವಿಹಾರದ ಬೋಧಿ ರತ್ನ ಬಂತೇಜಿ ಬಿಹಾರದ ಬೋಧ್‌ಗಯಾ ದೇವಾಲಯ ಕಾಯ್ದೆ (೧೯೪೯) ಯನ್ನು ರದ್ದುಗೊಳಿಸಬೇಕು. ಮಹಾ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿದರು. ಫೆ.೧೨ ರಿಂದ ಹಲವು ರಾಜ್ಯಗಳ ಬೌದ್ಧ ಭಿಕ್ಕುಗಳು ಡಾರ್ಜಿಲಿಂಗ್‌ನ ಆನಂದ್ ಲಾಮಾ ನೇತೃತ್ವದಲ್ಲಿ ಶಾಂತಿಯುತವಾಗಿ ಸರದಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು, ಕೆಲವು ಪಟ್ಟಭದ್ರರು ಈ ಹೋರಾಟವನ್ನು ವಿಫಲಗೊಳಿಸಲು ಸತ್ಯಾಗ್ರಹನಿರತ ಭಿಕ್ಕುಗಳ ಎದುರು ನಕಲಿ ಭಿಕ್ಕುಗಳಿಗೆ ಭೋಜನ ದಾನ ಮಾಡಿದ್ದಾರೆ. ನೈಜ ಭಿಕ್ಕುಗಳನ್ನು ಅಪಮಾನಿಸಿದ್ದಾರೆ. ವಿಹಾರದ ಎದುರು ಕೆಲವರು ಹರೇ ರಾಮ್, ಹರೇ ಕೃಷ್ಣ ಎಂದು ಭಜನೆ ಮಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಬಿಹಾರ ಸರ್ಕಾರ ಮಾತುಕತೆಗೆ ಆಹ್ವಾನಿಸಿದರೂ ಉಪವಾಸ ನಿರತ ಭಿಕ್ಕುಗಳು ತಿರಸ್ಕರಿಸಿದ್ದಾರೆ. ಬಿಹಾರದ ಪೊಲೀಸರು ಫೆ.೨೭ ರಂದು ತಡರಾತ್ರಿ ಮಲಗಿದ್ದ ಭಿಕ್ಕುಗಳನ್ನು ನಿಮ್ಮ ಆರೋಗ್ಯ ಸರಿಯಿಲ್ಲ ಎಂದು ಬಲವಂತವಾಗಿ ಆ್ಯಂಬುಲೆನ್ಸ್‌ನಲ್ಲಿ ಕೂರಿಸಿದ್ದಾರೆ. ಕೆಲವರನ್ನು ಸತ್ಯಾಗ್ರಹಕ್ಕೆ ಅನುಮತಿ ಪಡೆದಿಲ್ಲ ಎಂದು ಪೊಲೀಸ್ ವ್ಯಾನಿಗೆ ಬಲವಂತವಾಗಿ ಎತ್ತಿಹಾಕಿ ದೌರ್ಜನ್ಯ ನಡೆಸಿದ್ದಾರೆ. ಭಿಕ್ಕುಣಿಯರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದರು.ಉಪವಾಸ ನಿರತರನ್ನು ಬಂಧಿಸಿ ಎಲ್ಲಿಗೆ ಕರೆದೊಯ್ದಿದ್ದಾರೆ. ಎಲ್ಲಿ ಇರಿಸಿದ್ದಾರೆ ಎಂಬುದನ್ನು ತಿಳಿಸಿಲ್ಲ. ಅನಾರೋಗ್ಯ ಪೀಡಿತ ಬಂತೇಜಿಗಳನ್ನು ಕನಿಷ್ಠ ಆಸ್ಪತ್ರೆಗೂ ಸೇರಿಸಿಲ್ಲ. ಬಿಹಾರದ ಪೊಲೀಸರ ಈ ದುವರ್ತನೆಯನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ, ಪೊಲೀಸರ ಈ ಕೃತ್ಯ ಖಂಡನೀಯ, ದೌರ್ಜನ್ಯ ಎಸಗಿರುವ ಪೊಲೀಸರನ್ನು ತಕ್ಷಣ ವಜಾಗೊಳಿಸಬೇಕು, ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕೊಳ್ಳೇಗಾಲದ ಮನೋರಕ್ಕಿತ ಬಂತೇಜಿ, ಮೈಸೂರಿನ ಕಲ್ಯಾಣಸಿರಿ ಬಂತೇಜಿ, ಯಳಂದೂರಿನ ಬುದ್ಧರತ್ನ ಬಂತೇಜಿ, ಬಿಎಸ್‌ಐ ಬಸವರಾಜು, ಮಲ್ಲಿಕಾರ್ಜುನಸ್ವಾಮಿ, ಕೆ.ಎಂ.ನಾಗರಾಜು, ದೊಡ್ಡಿಂದವಾಡಿ ಸಿದ್ದರಾಜು, ಸಿ.ಎಂ. ಕೃಷ್ಣಮೂರ್ತಿ, ಮಹೇಶ್, ಮಣಿ, ದೇವೇಂದ್ರ, ಕೆ,ಎಂ. ಶಿವಣ್ಣ, ಚಿನ್ನಸ್ವಾಮಿ, ಪಾಳ್ಯ, ಲಿಂಗಣ್ಣ ಇತರರು ಇದ್ದರು.

Share this article