ರಾಜ್ಯಪಾಲರ ನಡೆ ಖಂಡಿಸಿ 27ರಂದು ಕಾಂಗ್ರೆಸ್‌ ರಾಜಭವನ ಚಲೋ

KannadaprabhaNewsNetwork |  
Published : Aug 25, 2024, 01:47 AM IST
ರಾಜ್ಯಪಾಲರ ನಡೆ ಖಂಡಿಸಿ ರಾಜಭವನ ಚಲೋ: ಎಸ್.ಎಂ.ಪಾಟೀಲ್ ಗಣಿಹಾರ | Kannada Prabha

ಸಾರಾಂಶ

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಂ.ಪಾಟೀಲ್ ಗಣಿಹಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹಾಗೂ ಸಿಎಂ ಸಿದ್ದರಾಮಯ್ಯನವರ ತೇಜೋವಧೆ ಖಂಡಿಸಿ ಆ.27ರಂದು ಬೆಳಗ್ಗೆ 11ಗಂಟೆಗೆ ರಾಜಭವನ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಸ್ವತಂತ್ರ ಉದ್ಯಾನದಿಂದ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರದ ಬಿಜೆಪಿ ಮಾತು ಕೇಳಿ ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಬಿಜೆಪಿ-ಜೆಡಿಎಸ್ ಕುತಂತ್ರಗಳನ್ನು ವಿರೋಧಿಸಿ ನಡೆಸಲಾಗುತ್ತಿರುವ ಹೋರಾಟ ಇದಾಗಿದೆ ಎಂದು ಮಾಹಿತಿ ನೀಡಿದರು.

ರಾಜಭವನ ಚಲೋ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ಸಂವಿಧಾನಬಾಹಿರ ರಾಜ್ಯಪಾಲರ ತಪ್ಪು ನಡೆಯನ್ನು ಖಂಡಿಸಿ, ರಾಜ್ಯಭವನ ಚಲೋ ನಡೆಸಲಾಗುತ್ತಿದೆ. ಅಬ್ರಾಹಂ ಎಂಬ ವ್ಯಕ್ತಿ 200 ಪುಟಗಳ ದೂರು ನೀಡಿದ ಮೇಲೆ ಕೇವಲ ಮೂರು ತಾಸಿನಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೆಂದರೆ ಮೊದಲೇ ಅನುಮತಿ ಪತ್ರ ಟೈಪ್ ಮಾಡಿ ಇಟ್ಟಿರಬಹುದು ಎಂದು ಶಂಕಿಸಿದರು. ರಾಜ್ಯಪಾಲರು ದಲಿತರಿದ್ದಾರೆಂದು ಬಿಜೆಪಿಯವರು ಈಗ ಹೊಸದಾಗಿ ಶುರು ಮಾಡಿದ್ದಾರೆ. ಬಿಜೆಪಿಯವರು ಜಾತಿ ಬಳಸಿಕೊಳ್ಳಲು ಹೊರಟಿದ್ದು ಅಹಸ್ಯಕರವಾಗಿದೆ. ಹಾಗಿದ್ದರೆ ಸಿದ್ದರಾಮಯ್ಯನವರು ಒಂದು ಜಾತಿಗೆ ಸೇರಿದ್ದು, ಆ ಜಾತಿ ಟಾರ್ಗೆಟ್ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು 550 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಕಂಪನಿಯೊಂದಕ್ಕೆ ಕೊಟ್ಟಿದ್ದಾರೆ. ಆದರೆ ಈಗ ಅದು ನಾನು ಸಹಿ ಮಾಡಿಲ್ಲ, ಯಾರೋ ಮಾಡಿದ್ದಾರೆ ಎನ್ನುತ್ತಾರೆ. ಇಂತಹವರನ್ನು ಸಿಎಂ ಮಾಡಿದ್ದೆವಲ್ಲಾ ಎಂದು ನಮಗೆ ಅಹಸ್ಯ ಆಗುತ್ತದೆ. ನಿಮ್ಮ ಸಹಿ ನಕಲಿ ಆಗಿದ್ದರೆ 10 ವರ್ಷಗಳಿಂದ ಏನು ಮಾಡುತ್ತಿದ್ದಿರಿ? ಯಾಕೆ ಸುಮ್ಮನೆ ಕುಳಿತಿದ್ದಿರಿ ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಹಾಗೂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರು ವೈಟ್ನರ್ ಹಚ್ಚಿದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ತಪ್ಪಾದಲ್ಲಿ ತಿದ್ದಿಕೊಳ್ಳಲು ಬಳಸಲೆಂದೇ ವೈಟ್ನರ್ ಇದೆ. ಅಷ್ಟಕ್ಕೂ ವೈಟ್ನರ್ ಹಚ್ಚಿದ ಅರ್ಜಿ ಮೇಲೆ ಯಾವುದೇ ಕ್ರಮವೇ ಆಗಿಲ್ಲ. ಬಿಜೆಪಿಯ ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗ ಕೊಟ್ಟ ಅರ್ಜಿ ಮೇಲೆ ನಿವೇಶನ ಹಂಚಿಕೆ ಆಗಿದೆ. ಹಾಗಾದರೆ ಬಿಜೆಪಿ ಹಾಗೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪರಾಧಿ ಸ್ಥಾನದಲ್ಲಿ ಇರಬೇಕಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ವೈದ್ಯಕೀಯ ಪ್ರಕೋಷ್ಠದ ಡಾ.ರವಿ ಬಿರಾದಾರ ಮಾತನಾಡಿ, ಥಾವರಚಂದ ಗೆಹ್ಲೋಟ್ ಅವರು ದಲಿತ ರಾಜ್ಯಪಾಲರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಇದನ್ನು ಬಿಜೆಪಿಯವರೇ ಹೇಳಿದ್ದು. ಬಿಜೆಪಿಯವರಿಗೆ ಬರಿ ಜಾತಿ ನೋಡುವ ಚಾಳಿ ಇದೆ. ರಾಜ್ಯಪಾಲರು ಕಾನೂನಿನಂತೆ ನಡೆದುಕೊಂಡಿಲ್ಲ ಎಂದು ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಜಾತಿ ಮೇಲೆ ಅಲ್ಲ ಎಂದು ತಿಳಿಸಿಕೊಟ್ಟರು.

ಬಿಜೆಪಿ ಸರ್ಕಾರ ಇದ್ದಾಗ ಶೇ.50ರಷ್ಟು ಭೂಮಿ ಕೊಡಬೇಕು ಎಂದು ಅವರೇ ಕಾನೂನು ರೂಪಿಸಿ ಹಂಚಿಕೆ ಮಾಡಿದ್ದಾರೆ. ಈಗ ರಾಜ್ಯಪಾಲರು ದುರುದ್ದೇಶದಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದ ಅದರ ವಿರುದ್ಧ ನಮ್ಮ ಹೋರಾಟ ಇದೆ. ವಾಮಮಾರ್ಗದಿಂದ ಅಧಿಕಾರಕ್ಕೆ ಬಿಜೆಪಿಯವರು ಬರಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ನಾವು ಅದನ್ನು ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ಹೀಗಾಗಿ ಎಲ್ಲ ವರ್ಗದ ಜನರು, ಅಭಿಮಾನಿಗಳು ಆ.27ಕ್ಕೆ ನಡೆಯುವ ರಾಜಭವನ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ದಲಿತ ಮುಖಂಡ ಸಂಜು ಕಂಬಾಗಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮಾಡಿದ ಆರೋಪ ಸುಳ್ಳು. ಆದರೆ, ಕುಮಾರಸ್ವಾಮಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ಅವರ ಮೇಲೆ ಒಂದು ವರ್ಷದಿಂದಲೂ ಆರೋಪವಿದೆ. ಅದನ್ನೇಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಫಯಾಜ್ ಕಲಾದಗಿ, ಮಲ್ಲು ಬಿದರಿ ಉಪಸ್ಥಿತರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ