ಮೈಸೂರು ಕನ್ನಡ ವೇದಿಕೆಯವರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತಿಭಟಿಸಿ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಜಂಬೂಸವಾರಿ ಯಶಸ್ವಿಯಾಗಿ ಮುಗಿಸಿದ ಮಾವುತರು ಮತ್ತು ಕಾವಾಡಿಗಳಿಗೆ ಗೌರವಧನ ನೀಡದಿರುವುದು ಹಾಗೂ ದಸರಾದಲ್ಲಿ ನಡೆದ ಅವ್ಯವಹಾರಗಳನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆಯವರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಜಂಬೂಸವಾರಿ ಮೆರವಣಿಗೆಯ ರೂವಾರಿಗಳಾದ ಮಾವುತರು ಹಾಗೂ ಕಾವಾಡಿಗರಿಗೆ ಅರಮನೆ ಮಂಡಳಿಯಿಂದ ಗೌರವಧನ ನೀಡದೆ ಅವಮಾನ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದಸರಾ ನಡೆಸುವವರಿಗೆ ಗೌರವಧನ ಕೊಡಲು ಹಣ ಇರಲಿಲ್ಲವೇ ಎಂದು ಅವರು ಪ್ರಶ್ನಿಸಿದರು.ದಸರಾದಲ್ಲಿ ಅವ್ಯವಹಾರ, ಹಗರಣಗಳು, ಹಗಲು ದರೋಡೆ, ರಾಜಕಾರಣಿಗಳ ಸಂಬಂಧಿಕರ ವೈಭವೀಕರಣವಾಗಿದೆ. ದಸರಾ ವೀಕ್ಷಣೆಗೆ ಬಂದ ಸಾರ್ವಜನಿಕರು ಸರ್ಕಾರಕ್ಕೆ ಶಾಪ ಹಾಕಿ ಹೊರ ಹೋಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಗೋಲ್ಡ್ ಪಾಸ್ ಗಳಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಅವರು ಆರೋಪಿಸಿದರು.ದಸರಾ ವೇಳೆಯಲ್ಲಿ ಗುಂಡಿ ಬಿದ್ದಿರುವ ರಸ್ತೆಗೆ ಡಾಂಬರೀಕರಣ ಮಾಡಲಿಲ್ಲ. ಪ್ರತಿ ವರ್ಷ ದಸರಾದಲ್ಲಿ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದರೂ ಪ್ರಾಯೋಜಕರಿಂದ ಹಣ ಪಡೆದರೂ, ಆ ಹಣದ ಬಗ್ಗೆ ಮಾಹಿತಿ ನೀಡುವುದಿಲ್ಲ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ಗುರುಬಸಪ್ಪ, ಗೋಪಿ, ಬಾಬು, ಸಿದ್ದಪ್ಪ, ಹರೀಶ್, ಗೋವಿಂದರಾಜು, ಸ್ವಾಮಿ, ಚಿನ್ನಪ್ಪ, ಶಿವುಗೌಡ, ಮಾದಪ್ಪ, ಸ್ವಾಮಿ, ಸುನಿಲ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.