ಬೆಳೆಹಾನಿ ಸಮೀಕ್ಷೆ ಮಾಡಿ ವರದಿ ಸರ್ಕಾರಕ್ಕೆ ಸಲ್ಲಿಸಿ-ಶಾಸಕ ಸಿಸಿಪಾ

KannadaprabhaNewsNetwork |  
Published : Jun 14, 2025, 02:19 AM ISTUpdated : Jun 14, 2025, 02:20 AM IST
(13ಎನ್.ಆರ್.ಡಿ1 ಕುರ್ಲಗೇರಿ ಗ್ರಾಮದ ಪಕ್ಕದಲ್ಲಿರುವ ಬೆಣ್ಣಿ ಹಳ್ಳದ ಪ್ರವಾಹವನ್ನು ಶಾಸಕ ಸಿ.ಸಿ.ಪಾಟೀಲರು ವಿಕ್ಷೇಣಿ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ನರಗುಂದ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಹಾನಿಯಾದ ಜಮೀನುಗಳನ್ನು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಹಾನಿಯಾದ ಜಮೀನುಗಳನ್ನು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಬೆಣ್ಣೆಹಳ್ಳಕ್ಕೆ ಹೊಂದಿಕೊಂಡಿರುವ ಪ್ರವಾಹ ಪೀಡಿತ ಗ್ರಾಮಗಳಾದ ಕುರ್ಲಗೇರಿ, ಸುರಕೋಡ, ಹದಲಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿ ಆನಂತರ ಮಾತನಾಡಿ, ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬುಧವಾರ ರಾತ್ರಿ ಜೋರಾದ ಮಳೆ ಸುರಿದಿದೆ. ಮೇಲಾಗಿ ಬೆಣ್ಣೆಹಳ್ಳದ ಮೇಲ್ಭಾಗದಲ್ಲಿ ವಿಪರೀತ ಮಳೆಯಾಗಿದ್ದರಿಂದ ಹಳ್ಳಕ್ಕೆ ಪ್ರವಾಹ ಬಂದು ಹಲವಾರು ಅನಾಹುತ ಸೃಷ್ಟಿಸಿದೆ. ಆದ್ದರಿಂದ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ ಸೇರಿದಂತೆ ಮುಂತಾದ ಬೆಳೆಗಳ ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಹಾಗಾಗಿ ಮಳೆ ನಿಂತ ಮೇಲೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಳೆ ಮತ್ತು ಹಳ್ಳದ ಪ್ರವಾಹಕ್ಕೆ ಹಾನಿಯಾದ ಬೆಳೆಗಳನ್ನು ಸಮೀಕ್ಷೆ ಮಾಡಿ ವರದಿಯನ್ನು ಸರ್ಕಾರಕ್ಕೆ ಕಳಸಿ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನಾನು ಕೂಡ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಳೆ ಹಾನಿ ಮಾಡಿಕೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದರು.

ನಮ್ಮ ತಾಲೂಕಿನ ವ್ಯಾಪ್ತಿಗೆ ಬರುವ ಬೆಣ್ಣೆಹಳ್ಳಕ್ಕೆ ಹೊಂದಿಕೊಂಡಿರುವ ರಸ್ತೆಗಳ ಸೇತುವೆಗೆ ಪ್ರವಾಹ ನೀರು ಬಂದು ಜಾಲಿ ಕಂಟಿಗಳು ಬಂದು ಸಿಕ್ಕಿವೆ. ಅವುಗಳನ್ನು ಪ್ರವಾಹ ನಿಂತ ಮೇಲೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ವಚ್ಛಗೊಳಿಸಬೇಕೆಂದು ತಿಳಿಸಿದರು.

ಸಿದ್ಧತೆ ಮಾಡಿಕೊಳ್ಳಿ: ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂ 15ರ ವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಬೀಳುವ ಸೂಚನೆ ನೀಡಿದ್ದಾರೆ. ಆದ್ದರಿಂದ ತಾಲೂಕು ಆಡಳಿತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಬಿದ್ದು ಪ್ರವಾಹ ಸೃಷ್ಟಿಯಾದರೆ ಅದನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಈಶ್ವರಗೌಡ ಪಾಟೀಲ, ಎಸ್.ಬಿ. ಕರಿಗೌಡರ, ಬಸವಣ್ಣಪ್ಪ ಸುಂಕದ, ಎಸ್.ಎಸ್. ಪಾಟೀಲ, ಬಿ.ಬಿ. ಐನಾಪುರ, ಪ್ರಕಾಶಗೌಡ ತಿರಕನಗೌಡ್ರ, ಚಂದ್ರಶೇಖರ ದಂಡಿನ, ನಾಗನಗೌಡ ತಿಮ್ಮನಗೌಡ್ರ, ಮಲ್ಲಪ್ಪ ಮೇಟಿ, ತಹಸೀಲ್ದಾರ್ ಶ್ರೀಶೈಲ ತಳವಾರ, ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ, ಜಿಪಂ ಅಧಿಕಾರಿ ಬೇವಿನಮರದ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಂ. ಬಡಿಗೇರ, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ಸಿಪಿಐ ಮಂಜುನಾಥ ನಡುವಿನಮನಿ, ಅನಿಲ ಧರಿಯಣ್ಣವರ, ನಾಗರಾಜ ನೆಗಳೂರ, ವಿಠಲ ಹವಾಲ್ದಾರ, ಇತರೆ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ