ವಿಶೇಷ ಅಗತ್ಯವುಳ್ಳ ಮಕ್ಕಳ ಸಮೀಕ್ಷೆ ಮಾಡಿ: ಶಾಸಕ ಯು.ಬಿ. ಬಣಕಾರ

KannadaprabhaNewsNetwork | Published : Apr 9, 2025 12:34 AM

ಸಾರಾಂಶ

ಸರ್ಕಾರದಿಂದ ನೀಡುತ್ತಿರುವ ಈ ಪರಿಕರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಹಿರೇಕೆರೂರು: ವಿಶೇಷ ಅಗತ್ಯವುಳ್ಳ ತಮ್ಮ ಮಕ್ಕಳನ್ನು ಪಾಲಕರು ಅತ್ಯಂತ ಕಾಳಜಿ ವಹಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಗೃಹಾಧಾರಿತ ಮಕ್ಕಳಿಗೆ ಬೆಂಬಲ ನೀಡುವ ಕುರಿತಾಗಿ 2024- 25ನೇ ಸಾಲಿನಲ್ಲಿ ಅನುಮೋದನೆಯಾದ ಬ್ಲಾಕ್ ಹಂತದ ಹಣದಲ್ಲಿ ಉಪಕರಣಗಳನ್ನು ವಿಶೇಷಚೇತನ ಮಕ್ಕಳಿಗೆ ನೀಡಿ ಮಾತನಾಡಿ, ಸರ್ಕಾರದಿಂದ ನೀಡುತ್ತಿರುವ ಈ ಪರಿಕರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕಿನ ಎಲ್ಲ ಬಿಐ, ಆರ್‌ಟಿಯವರು ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಎಲ್ಲ ವಿಶೇಷ ಅಗತ್ಯವುಳ್ಳ ಮಕ್ಕಳ ಸಮೀಕ್ಷೆ ಮಾಡಿ ಅವರ ದೈಹಿಕ ನ್ಯೂನತೆ ಗುರುತಿಸಬೇಕು. ಶಿಕ್ಷಣ ಇಲಾಖೆ ಸರ್ಕಾರದಿಂದ ಪೂರೈಸಿದ ಪರಿಕರಗಳನ್ನು ಸಕಾಲದಲ್ಲಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್ ಎನ್., ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶ್ ಕುಮಾರ್, ಬಿಆರ್‌ಪಿ, ಸಿಆರ್‌ಪಿ, ಬಿಐಈಆರ್‌ಟಿ ಎಲ್ಲ ಸಿಬ್ಬಂದಿ ಹಾಗೂ ಪಾಲಕರು, ವಿದ್ಯಾರ್ಥಿಗಳು ಇದ್ದರು.ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಗುತ್ತಲ: ನೆಗಳೂರು ಗ್ರಾಮದಲ್ಲಿ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಅಗ್ನಿಕುಂಡವನ್ನು ಹಾಯುವ ಮೂಲಕ ಭಕ್ತರು ಭಕ್ತಿಭಾವ ಮೆರೆದರು.ದೇವಸ್ಥಾನದಲ್ಲಿ ಬೆಳಗ್ಗೆ ನೆಗಳೂರಿನ ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ ಗುಗ್ಗಳ ಕೊಡಕ್ಕೆ ಅಗ್ನಿ ಸ್ಪರ್ಶ ಮಾಡುವ ಮುಖಾಂತರ ಚಾಲನೆ ನೀಡಿದರು. ನಂತರ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಉತ್ಸವವು ಆರತಿಯೊಂದಿಗೆ ಸಮ್ಮಾಳದ ನಾದಕ್ಕೆ ಪುರವಂತರ ಒಡಪುಗಳನ್ನು ಕೇಳುತ್ತಾ ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನಕ್ಕೆ ಬಂದ ನಂತರ ಅಗ್ನಿಕುಂಡ ಪ್ರವೇಶಿಸುವ ಮುನ್ನ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಅಗ್ನಿಕುಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಗ್ನಿಕುಂಡದಲ್ಲಿ ಪುರವಂತರಲ್ಲದೇ ಸಾವಿರಾರು ಭಕ್ತರು ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.ಗ್ರಾಮದ ಹನುಮಂತಪ್ಪ ಪೂಜಾರ 108 ಅಡಿಯ ನೂಲಿನ ದಾರವನ್ನು ನಾಲಿಗೆಯಲ್ಲಿ ಹಾಕಿಕೊಂಡು ದಾರದ ಪವಾಡವನ್ನು ನೆರವೇರಿಸಿದರು. ಸಂಜೆ ಓಕುಳಿ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಗುರುಶಾಂತಸ್ವಾಮಿ ಹಿರೇಮಠ, ಬಸವರಾಜ ಮರಗಬ್ಬಿನ, ಸೋಮಣ್ಣ ಸಪ್ಪಣ್ಣನವರ, ಶಂಕರಗೌಡ ಬೆಳವಿಗಿ, ಶಂಭುಲಿಂಗಯ್ಯ ಮಠದ, ಈಶ್ವರ ಶಿಡೆನೂರ, ವೀರೇಶ ಗಿರಿಯಣ್ಣನವರ, ಗುರು ಪತ್ರಿ, ಶೇಖಪ್ಪ ಕೆರೂರ, ಫಕ್ಕೀರೇಶ ಚಂದಣ್ಣನವರ, ರಮೇಶ ಶೀಡೆನೂರ, ವೀರಣ್ಣ ಬಡಿಗೇರ, ರುದ್ರಪ್ಪ ಅರ್ಕಚಾರಿ, ವೀರಯ್ಯ ಕಲ್ಮಠ ಇತರರು ಇದ್ದರು.

Share this article