3.46 ಲಕ್ಷ ಮಕ್ಕಳ ಭವಿಷ್ಯಕ್ಕಾಗಿ ಸಿಇಟಿ ಮರುಪರೀಕ್ಷೆ ನಡೆಸಿ: ಸತೀಶ್‌ ಆಗ್ರಹ

KannadaprabhaNewsNetwork | Published : Apr 26, 2024 12:52 AM

ಸಾರಾಂಶ

ಉನ್ನತ ಶಿಕ್ಷಣ ಕೋರ್ಸ್‌ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಬಿರುಗಾಳಿಯಂತೆ ಸದ್ದು ಮಾಡುತ್ತಿದೆ. ಇದರಿಂದಾಗಿ 3.46 ಲಕ್ಷ ಮಕ್ಕಳು ಹಾಗೂ ಲಕ್ಷಾಂತರ ಪಾಲಕರಲ್ಲಿ ಆತಂಕ ಮಡುವುಗಟ್ಟಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕಾಂಗ್ರೆಸ್ ಸರ್ಕಾರ ಅಸಡ್ಡೆಯಿಂದಾಗಿ ಔಟ್ ಆಫ್ ಸಿಲೆಬಸ್‌ ಬಿರುಗಾಳಿ: ಆರೋಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಉನ್ನತ ಶಿಕ್ಷಣ ಕೋರ್ಸ್‌ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಬಿರುಗಾಳಿಯಂತೆ ಸದ್ದು ಮಾಡುತ್ತಿದೆ. ಇದರಿಂದಾಗಿ 3.46 ಲಕ್ಷ ಮಕ್ಕಳು ಹಾಗೂ ಲಕ್ಷಾಂತರ ಪಾಲಕರಲ್ಲಿ ಆತಂಕ ಮಡುವುಗಟ್ಟಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಇಟಿ ಪರೀಕ್ಷೆಯಲ್ಲಿ ಕೈಬಿಟ್ಟ ಪಠ್ಯಕ್ರಮಗಳಿಂದ 50ಕ್ಕೂ ಹೆಚ್ಚು ಅಂಕಗಳ ಪ್ರಶ್ನೆಗಳ ನೀಡಲಾಗಿದೆ. ಇದರಿಂದಾಗಿ ಮಕ್ಕಳ ಭವಿಷ್ಯಕ್ಕೆ ಕುತ್ತು ಬಂದಿದೆ. ಉಜ್ವಲ ಭವಿಷ್ಯ, ಉನ್ನತ ಶಿಕ್ಷಣಕ್ಕಾಗಿ ಮಕ್ಕಳು ಹಗಲಿರುಳು ಕಷ್ಟಪಟ್ಟು ಓದಿದ್ದರು. ಈಗ ಆ ಎಲ್ಲ ಮಕ್ಕಳಿಗೂ ದಿಕ್ಕೇ ತೋಚದಂತಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಡ್ಡೆ, ಅಜ್ಞಾನದಿಂದಾಗಿ ಸಿಟಿಇ ಗೊಂದಲ ದೊಡ್ಡದಾಗಿ ಕಾಡುತ್ತಿದೆ. ರಾಜ್ಯವ್ಯಾಪಿ 3.46 ಲಕ್ಷ ಮಕ್ಕಳು ಸಿಇಟಿ ಪರೀಕ್ಷೆ ಬರೆದಿದ್ದು, ಅವರ ಭವಿಷ್ಯ ಡೋಲಾಯಾಮಾನವಾಗಿದೆ. ಹತ್ತಾರು ಕನಸು ಕಟ್ಟಿಕೊಂಡು, ವಿವಿಧ ಕೋರ್ಸ್ ಗಳ ಪ್ರವೇಶಕ್ಕಾಗಿ ಸಿಇಟಿಗೆ ಸಿದ್ಧವಾಗಿದ್ದ ಮಕ್ಕಳ ಕೈಗೆ ಪ್ರಶ್ನೆಪತ್ರಿಕೆ ಸೇರುತ್ತಿದ್ದಂತೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಕಂಗಾಲಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಗೊಂದಲಮಯ ವಾತಾವರಣ ಸೃಷ್ಟಿಯಾಗಿದ್ದು, ಅದಕ್ಕೆ ಜ್ವಲಂತ ನಿದರ್ಶನ ಈ ಸಲಹಾ ಸಿಇಟಿ ಪರೀಕ್ಷೆಯಾಗಿದೆ ಎಂದು ಟೀಕಿಸಿದರು.

ಪಕ್ಷದ ಶಿಕ್ಷಣ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ತ್ಯಾವಣಿಗೆ ವೀರಭದ್ರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿರ್ಧಾರ, ಅಜ್ಞಾನಿಗಳು ಕೈಗೊಂಡ ತೀರ್ಮಾನಗಳು, ಸ್ವಾರ್ಥ ಸಾಧನೆಯ ಚಿಂತನೆಗಳು ವಿದ್ಯಾರ್ಥಿ ಸಮುದಾಯವನ್ನೇ ದಾರಿ ತಪ್ಪಿಸುವಂತಿವೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ದೃಢತೆ, ದೂರದೃಷ್ಟಿಯುಳ್ಳ ಜವಾಬ್ದಾರಿ, ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ದ್ವಿತೀಯ ಪಿಯು ಪಠ್ಯಕ್ರಮ ಶೈಕ್ಷಣಿಕ ವರ್ಷ ಆರಂಭವಾದಾಗಲೇ ತಿಳಿದಿರುತ್ತದೆ. ಹಾಗಿರುವಾಗ ಸಿಇಟಿ ಪರೀಕ್ಷೆ ನಡೆಸುವ ಪ್ರಾಧಿಕಾರಕ್ಕೆ, ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಜ್ಞರಿಗೆ ಇವುಗಳ ಅರಿವು ಇರಲಿಲ್ಲವೇ? ತಕ್ಷಣವೇ ಸರ್ಕಾರ ಮರುಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದರು.

ಮುಖಂಡರಾದ ಎನ್.ಆರ್.ಹರೀಶ, ಪಿ.ಎನ್.ಪರಮೇಶ್ವರಪ್ಪ, ಶ್ಯಾಗಲೆ ಮಲ್ಲೇಶ್ವರಪ್ಪ, ಮಂಜುನಾಥ ಸ್ವಾಮಿ, ಎಚ್.ಜಿ.ಪ್ರಕಾಶ, ವೀರೇಶ ಬಿರಾದಾರ್‌, ಚೇತನಾ ಶಿವಕುಮಾರ, ಜಿ.ವಿ.ಗಂಗಾಧರ ಇತರರು ಇದ್ದರು.

- - -

ಕೋಟ್‌ ಔಟ್ ಆಫ್ ಸಿಲೆಂಬಸ್‌ನ ಸಿಇಟಿ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಸರ್ಕಾರ ಕೃಪಾಂಕ ನೀಡಿದರೆ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತದೆ. ಸಮಾನ ಕೃಪಾಂಕದಿಂದ ಅರ್ಹ ವಿದ್ಯಾರ್ಥಿಗಳ ಕನಸಿಗೆ ತಣ್ಣೀರು ಎರಚಿದಂತಾಗುತ್ತದೆ.

- ತ್ಯಾವಣಿಗೆ ವೀರಭದ್ರಸ್ವಾಮಿ, ಸದಸ್ಯ, ರಾಜ್ಯ ಸಮಿತಿ

- - --25ಕೆಡಿವಿಜಿ1:

ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article