ಶಿಸ್ತು ಬದ್ಧವಾಗಿ ಕೆ-ಸೆಟ್ ಪರೀಕ್ಷೆ ನಡೆಸಿ: ಡಾ. ನಾಗರಾಜು

KannadaprabhaNewsNetwork |  
Published : Jan 12, 2024, 01:45 AM IST
11ಕೆಎಂಎನ್‌ಡಿ-7ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಮಾತನಾಡಿದರು. | Kannada Prabha

ಸಾರಾಂಶ

ಇದೇ ಮೊದಲ ಬಾರಿಗೆ ಕೆ‌-ಸೆಟ್ ಪರೀಕ್ಷೆ ಜಿಲ್ಲೆಯ 19 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 7779 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ‌.

ನಾಳೆಯಿಂದ ನಗರ ವ್ಯಾಪ್ತಿಯ 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ । 7779 ಪರೀಕ್ಷಾರ್ಥಿಗಳು ಭಾಗಿ । ಅಕ್ರಮಗಳಿಗೆ ಅವಕಾಶ ಕೊಡಬೇಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜ.13 ರಂದು ಜಿಲ್ಲೆಯ (ಮಂಡ್ಯ ನಗರ ವ್ಯಾಪ್ತಿಯಲ್ಲಿರುವ) 19 ಪರೀಕ್ಷಾ ಕೇಂದ್ರಗಳಲ್ಲಿ ಕೆ -ಸೆಟ್ ಪರೀಕ್ಷೆ ನಡೆಸಲಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೆ ಶಿಸ್ತುಬದ್ಧವಾಗಿ ನಡೆಸಬೇಕು‌ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ಮೊದಲ ಬಾರಿಗೆ ಕೆ‌-ಸೆಟ್ ಪರೀಕ್ಷೆ ಜಿಲ್ಲೆಯ 19 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 7779 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ‌. ಪರೀಕ್ಷೆಯು ಎರಡು ಅಧಿವೇಶನವನ್ನೊಳಗೊಂಡಿದ್ದು ಕ್ರಮವಾಗಿ ಪತ್ರಿಕೆ-1 ಬೆಳಗ್ಗೆ 10 ರಿಂದ 11 ಗಂಟೆಯವರೆಗೆ, ಪತ್ರಿಕೆ-2 ಅಪರಾಹ್ನ 12 ರಿಂದ 2 ಗಂಟೆವರೆಗೆ ನಡೆಯಲಿದೆ ಎಂದರು.

ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಿ ಎರಡೂ ಪತ್ರಿಕೆಗಳ ಪರೀಕ್ಷೆ ಮುಗಿದ ನಂತರವೇ ಹೊರಹೋಗಲು ಅವಕಾಶವಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ವೈಟ್ ಫ್ಲೂಯಿಡ್, ವೈರ್‌ಲೆಸ್ ಸೆಟ್ಸ್ ಇತ್ಯಾದಿ ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾರ್ಥಿಗಳು ತಮಗೆ ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ತಮಗೆ ಪ್ರವೇಶ ಪತ್ರದಲ್ಲಿ ತಿಳಿಸಿರುವ ರೀತಿ ವಸ್ತ್ರ ಸಂಹಿತೆ‌ ಪಾಲಿಸಬೇಕು ಎಂದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆಗೆ ತ್ರಿಸದಸ್ಯರನ್ನೊಳಗೊಂಡ 6 ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ವೀಕ್ಷಕರು ಹಾಗೂ ಪರೀಕ್ಷೆಗೆ ನಿಯೋಜಿಸಲಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರೀಕ್ಷಾ ಪ್ರಾಧಿಕಾರ ಕಾಲಕಾಲಕ್ಕೆ ನೀಡಲಾಗುವ ಸಲಹೆ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಲುವಯ್ಯ, ಅಧೀಕ್ಷಕ ರಾಜೇಗೌಡ, ಉಪ ತಹಸೀಲ್ದಾರ್ ವಸಂತಕುಮಾರ್, ನಗರಸಭೆ ಆಯುಕ್ತ ಆರ್.ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್. ಶಿವರಾಮೇಗೌಡ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ