ಶಿರಸಿ: ನಗರದ ಸಿಪಿ ಬಜಾರ್‌ನ ಬಾರಕೂರ್ ಚೌಕದಿಂದ ಬಸ್ತಿಗಲ್ಲಿವರೆಗೆ ಸರಕು ಸಾಗಾಣಿಕೆ ಅವಕಾಶಕ್ಕೆ ೫ ಕಡೆ ಲೋಡಿಂಗ್ ಅನ್‌ಲೋಡಿಂಗ್‌ಗೆ ಸ್ಥಳ ನಿಗದಿ ಮಾಡಿ, ಪ್ರತಿ ವಾಹನಗಳಿಗೆ ಒಂದು ಗಂಟೆ ಮಾತ್ರ ನಿಲುಗಡೆ ಅವಕಾಶ ಕಲ್ಪಿಸಿ, ಪ್ರಾಯೋಗಿಕ ಪರೀಕ್ಷೆ ನಡೆಸಿ, ಸಾಧಕ- ಬಾಧಕ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ನಗರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ವರ್ತಕರು, ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಸಭೆಯಲ್ಲಿ ಮಾತನಾಡಿ, ಸರಕು ಸಾಗಾಣಿಕಾ ವಾಹನಗಳ ಈ ಹಿಂದೆ ಅವಧಿ ನಿಗದಿ ಮಾಡಲಾಗಿತ್ತು. ಇದರಿಂದ ಸಿಪಿ ಬಜಾರ್ ಭಾಗದ ವರ್ತಕರು ತೀವ್ರ ಸಮಸ್ಯೆಯಾಗುತ್ತಿದೆ ಎಂಬುದನ್ನು ಗಮನಕ್ಕೆ ತಂದಿದ್ದರು. ಅವರು ಹೇಳಿರುವಂತೆ ೫ ಕಡೆ ಲೋಡಿಂಗ್, ಅನ್‌ಲೋಡಿಂಗ್ ಸ್ಥಳ ಗುರುತಿಸಿ, ಸೂಚನಾ ಫಲಕ ಅಳವಡಿಸಿ ಅನುಕೂಲ ಕಲ್ಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಸಾಧಕ- ಬಾಧಕಗಳನ್ನು ಚರ್ಚಿಸಿ, ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದರು.ನಗರದ ಹಳೆ ಬಸ್ ನಿಲ್ದಾಣದಿಂದ ಬಾರಕೂರ್ ಚೌಕದವರೆಗೆ ರಸ್ತೆ ಅಗಲೀಕರಣ ಮಾಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಸಾಧ್ಯ. ರಸ್ತೆ ಅಗಲೀಕರಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದ ಅವರು, ಶಾಲಾ- ಕಾಲೇಜುಗಳ ಎದುರುಗಡೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಎಚ್‌ಕೆಎಚ್ ಆಸ್ಪತ್ರೆ ಎದುರಿನಲ್ಲಿ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ ಎಂದರು.
ವರ್ತಕ ಜಿ.ಜಿ. ಹೆಗಡೆ ಕಡೆಕೋಡಿ ಮಾತನಾಡಿ, ನಗರದಲ್ಲಿ ಪಾದಚಾರಿಗಳ ಸುರಕ್ಷತೆಯ ಬಗ್ಗೆ ಇಲ್ಲ. ಫುಟ್‌ಪಾತ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಅವೈಜ್ಞಾನಿಕವಾಗಿ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆ ಕಂಡು ಹೊರಭಾಗದ ಸಾರ್ವಜನಿಕರು ಆಶ್ಚರ್ಯ ಪಡುತ್ತಿದ್ದಾರೆ. ಸಿಪಿ ಬಜಾರ್ ವಾಣಿಜ್ಯ ಉದ್ಯಮಕ್ಕೆ ಸಬಂಧಿಸಿದ ರಸ್ತೆಯಾಗಿದೆ. ಇಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಿದರೆ ವ್ಯಾಪಾರಸ್ಥರು ಸಮಸ್ಯೆ ಎದುರಿಸುತ್ತಾರೆ. ಬದಲಿ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಹಂಪ್ಸ್‌ನಿಂದ ಅಪಘಾತವಾಗುತ್ತದೆ. ಬಾರಕೂರ್ ಚೌಕ್‌ದಿಂದ ಕೆನರಾ ಬ್ಯಾಂಕ್‌ವರೆಗೆ ಕಾರುಗಳ ಪಾರ್ಕಿಂಗ್‌ಗೆ ಅವಕಾಶ ನೀಡಬಾರದು. ಕಾರು ನಿಲುಗಡೆಯಿಂದ ಪಾದಚಾರಿಗಳು ರಸ್ತೆಯ ಮೇಲೆ ಓಡಾಡುವಂತಹ ಸ್ಥಿತಿ ಇದೆ ಎಂದರು.ಸಭೆಯಲ್ಲಿ ತಹಸೀಲ್ದಾರ ಶ್ರೀಧರ ಮುಂದಲಮನಿ, ಡಿಎಸ್‌ಪಿ ಕೆ.ಎಲ್. ಗಣೇಶ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ನಗರಸಭೆ ಪೌರಾಯುಕ್ತ ಕಾಂತರಾಜು, ಸಿಪಿಐ ಶಶಿಕಾಂತ ವರ್ಮಾ, ನಗರ ಠಾಣೆ ಪಿಎಸ್ಐ ನಾಗಪ್ಪ ಬಿ., ಮಾರುಕಟ್ಟೆ ಠಾಣೆ ಪಿಎಸ್ಐ ರತ್ನಾ ಕೆ. ಸೇರಿದಂತೆ ಅಧಿಕಾರಿಗಳು ಇದ್ದರು.