ಅಪ್ಪಾಜಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಡಾ.ಸಾರಂಗಧರ

KannadaprabhaNewsNetwork |  
Published : Nov 03, 2026, 01:15 AM IST
 | Kannada Prabha

ಸಾರಾಂಶ

ಶಿಕ್ಷಣ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿರುವ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರದಾನ ಮಾಡಬೇಕು ಎಂದು ಆಂಧ್ರಪ್ರದೇಶದ ಶ್ರೀಶೈಲಂ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶಿಕ್ಷಣ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿರುವ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರದಾನ ಮಾಡಬೇಕು ಎಂದು ಆಂಧ್ರಪ್ರದೇಶದ ಶ್ರೀಶೈಲಂ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಆಗ್ರಹಿಸಿದರು.ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಶರಣಬಸವೇಶ್ವರ ದೇವಸ್ಥಾನದ ಆವರಣದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ಡಾ. ಅಪ್ಪಾಜಿ ಅವರ ಕೊಡುಗೆ ಅನನ್ಯ. 40 ಸಾವಿರ ರು. ಸಾಲದ ಹೊರೆ ಹೊತ್ತು ಸಂಸ್ಥಾನದ ಜವಾಬ್ದಾರಿ ವಹಿಸಿಕೊಂಡ ಅವರು, ಇಡೀ ಜೀವನವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯ ಸ್ಥಾಪನೆಗೂ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.ಡಾ. ಅಪ್ಪಾಜಿ ಅವರಿಗೆ ಜೀವಿತಾವಧಿಯಲ್ಲಿಯೇ ಕರ್ನಾಟಕ ರತ್ನ ನೀಡದಿರುವುದು ಅನ್ಯಾಯ. ಈ ಬೇಡಿಕೆಗೆ ಸರ್ಕಾರ ಸ್ಪಂದಿಸುವಂತೆ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಜನರು ಮುಖ್ಯಮಂತ್ರಿಗೆ ಪತ್ರ ಬರೆಯಬೇಕು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಾಯಿಸಬೇಕು ಎಂದು ಕರೆ ನೀಡಿದರು.

ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು 18ನೇ ಶತಮಾನದ ಸಂತ ಶರಣಬಸವೇಶ್ವರರ ಪುನರ್ಜನ್ಮದಂತಿದ್ದು, ಡಾ. ಅಪ್ಪಾಜಿ ಅವರ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಇತ್ತ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಅಪ್ಪಾಜಿಯವರ ಲಿಂಗೈಕ್ಯದ ನಂತರವೂ ದಾಸೋಹ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುತ್ತಿದ್ದಾರೆ ಎಂದು ಸಾರಂಗಧರ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮಾತನಾಡಿ, ಡಾ. ಅಪ್ಪಾಜಿ ಅವರ ಕನಸುಗಳನ್ನು ನನಸಾಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಮುಗಳನಾಗಾವಿಯ ಕಟ್ಟಿಮನಿ ಹಿರೇಮಠ ಸಂಸ್ಥಾನದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರ ತುಲಾಭಾರವನ್ನು ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಸಮರ್ಪಿಸಿದ ನಾಣ್ಯಗಳಿಂದ ಹಾಗೂ ಭಕ್ತ ದಂಪತಿ ಮಾಣಿಕಮ್ಮ ಮತ್ತು ಮಡಿವಾಳಯ್ಯ ಅವರು ನೀಡಿದ ರುದ್ರಾಕ್ಷಿಗಳಿಂದ ನೆರವೇರಿಸಲಾಯಿತು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ ರಚಿಸಿದ ಪೂಜ್ಯ ಡಾ. ಅವ್ವಾಜಿಯವರ ಚಿತ್ರಾತ್ಮಕ ಜೀವನ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಲಾಯಿತು. ಚೌಡಾಪುರಿ ಹಿರೇಮಠದ ಡಾ. ರಾಜಶೇಖರ ಮಹಾಸ್ವಾಮೀಜಿ, ಚಿ. ದೊಡ್ಡಪ್ಪ ಅಪ್ಪಾಜಿ ಅವರ ಸಹೋದರಿಯರಾದ ಭವಾನಿ, ಶಿವಾನಿ, ಮಹೇಶ್ವರಿ, ಉಮಾ ಕಾಡಾದಿ, ಡಾ. ಗಂಗಾಂಬಿಕಾ ನಿಷ್ಠಿ, ರಾಜಾ ಭೀಮಳ್ಳಿ, ದೊಡ್ಡಪ್ಪ ನಿಷ್ಠಿ, ಡಾ.ಉಮಾ ದೇಶಮುಖ, ಡಾ.ಅಲ್ಲಮಪ್ರಭು ದೇಶಮುಖ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ವಿವಿ ನಿರ್ದೇಶಕ ಡಾ. ವಿ.ಡಿ. ಮೈತ್ರಿ, ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಡಾ. ಕಿರಣ ಮಾಕಾ, ಡೀನ್ ಡಾ. ಶಿವಕುಮಾರ ಜವಳಗಿ ಸೇರಿದಂತೆ ಗಣ್ಯರು, ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8 ರು. ಹಾಲಿನ ದರ ಏರಿಕೆಯ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಅಡ್ಡಂಡ ಕಾರ್ಯಪ್ಪಗೆ ಮಸಿ: 2 ಕೇಸ್‌ ದಾಖಲು