ಸಮ್ಮೇಳನಗಳು ಜಾತ್ರೆಯಾಗದೇ ಕನ್ನಡದ ಹಬ್ಬವಾಗಲಿ

KannadaprabhaNewsNetwork | Published : Jan 17, 2024 1:52 AM

ಸಾರಾಂಶ

ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ಬಸವನಬಾಗೇವಾಡಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸುವ ಕುರಿತಂತೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿಕೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾತ್ರೆಯಾಗದೇ ಕನ್ನಡದ ಹಬ್ಬದ ರೀತಿಯಲ್ಲಿ ನಡೆಯುವಂತಾಗಬೇಕು. ಹೀಗಾದಾಗ ಸಮ್ಮೇಳನದ ಆಚರಣೆಗೆ ನಿಜವಾದ ಗೌರವ ಬರುತ್ತದೆ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ಬಸವನಬಾಗೇವಾಡಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸುವ ಕುರಿತಂತೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು. ತಾಲೂಕು ಕಸಾಪ ಅಧ್ಯಕ್ಷರು ಯಾರ ಕೈಗೊಂಬೆಯಾಗಬಾರದು. ಕಳೆದ ಮನಗೂಳಿಯಲ್ಲಿ ಜರುಗಿದ ತಾಲೂಕು 9ನೇ ಸಮ್ಮೇಳನದಲ್ಲಿ ಸನ್ಮಾನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಹಾಗಾಗದಂತೆ ನೂತನ ಅಧ್ಯಕ್ಷರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪ್ರಭಾಕರ ಖೇಡದ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನ ಮಾಡಲು ತಾಲೂಕು ಘಟಕದ ಪದಾಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವಂತೆ ಕಸಾಪ ತಾಲೂಕು ಅಧ್ಯಕ್ಷರು ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿಕೊಳ್ಳಬೇಕು. ಎಲ್ಲ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಮಾದರಿ ಸಮ್ಮೇಳನ ಆಚರಿಸುವಂತೆ ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಾಪ ನೂತನ ಅಧ್ಯಕ್ಷ ಶಿವಾನಂದ ಡೋಣೂರ ಮಾತನಾಡಿ, ನಾನು ಎಲ್ಲರ ಸಲಹೆ-ಮಾರ್ಗದರ್ಶನ ಮೇರೆಗೆ ಕಸಾಪ ಘಟಕವನ್ನು ಮುನ್ನಡೆಸುತ್ತೇನೆ. ಜ.17ರಂದು ನಾಗೂರ ಗ್ರಾಮದಲ್ಲಿ ನಮ್ಮ ಎಲ್ಲ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವಿದೆ. ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುವುದಾಗಿ ಹೇಳಿದರು.

ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಹಿಂದೆ ನಡೆದು ಬಂದ ಹಾದಿಯನ್ನು ಮೆಲುಕು ಹಾಕುವ ಅವಶ್ಯಕತೆ ಇರುತ್ತದೆ. ನೂತನ ಅಧ್ಯಕ್ಷರು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಮ್ಮೇಳನ ಯಶಸ್ವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಎಸ್.ಐ.ಬಿರಾದಾರ, ದೇವೇಂದ್ರ ಗೋನಾಳ, ಎನ್.ಎನ್.ಅಂಗಡಿ, ಲಕ್ಷ್ಮೀ ಕಳ್ಳಿಗುಡ್ಡ ಮಾತನಾಡಿದರು. ಸಭೆಯಲ್ಲಿ ಸಾಹಿತ್ಯ ಸಮ್ಮೇಳನ ಎಲ್ಲಿ ಆಚರಿಸಬೇಕು ಎಂಬ ಚರ್ಚೆ ಆರಂಭವಾಗುತ್ತಿದ್ದಂತೆ ಕಸಾಪ ಸದಸ್ಯ ವಾಸುದೇವ ಮ್ಯಾಗೇರಿ ಅವರು, ತಾಲೂಕಿನಲ್ಲಿ 800 ಜನ ಕಸಾಪ ಸದಸ್ಯರಿದ್ದಾರೆ. ಸಭೆಯಲ್ಲಿ ಕೆಲವೇ ಕೆಲವು ಸದಸ್ಯರು ಹಾಜರಿದ್ದಾರೆ. ಎಲ್ಲರನ್ನು ಒಗ್ಗೂಡಿಸಿ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತ ಎಂದು ತಿಳಿಸುತ್ತಿದ್ದಂತೆ ಉಳಿದವರು ದನಿಗೂಡಿಸಿದರು.

ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಿಗೆ ಆಹ್ವಾನ ನೀಡದೆ ಇರುವುದಕ್ಕೆ ಸಭೆಯಲ್ಲಿ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣವಾಗದೇ ಸಮ್ಮೇಳನ ಆಚರಣೆಯ ಪೂರ್ವ ಭಾವಿ ಸಭೆ ಕರೆದಿರುವುದು ಚರ್ಚೆಗೆ ಗ್ರಾಸವಾಯಿತು. ಸಮ್ಮೇಳನ ದಿನಾಂಕ ನಿಗದಿಯಾಗಲಿಲ್ಲ. ಸಮ್ಮೇಳನವನ್ನು ಬಸವನಬಾಗೇವಾಡಿ, ಇವಣಗಿ, ಮಸಬಿನಾಳ, ಹುಣಶ್ಯಾಳ ಪಿಬಿ, ಮುತ್ತಗಿ ಸ್ಥಳದಲ್ಲಿ ಆಯೋಜನೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಎಸ್.ಬಿ.ದಳವಾಯಿ, ಎಂ.ಎನ್.ಅಂಗಡಗೇರಿ, ಬಸವರಾಜ ಮೇಟಿ, ಸಿದ್ದು ಬಾಗೇವಾಡಿ, ಎಂ.ಎಸ್. ಪೂಜಾರಿ, ಆರ್.ಜಿ.ಕನಸೆ, ಎಸ್.ಎಲ್.ಓಂಕಾರ, ಎಚ್.ಬಿ.ಬಾರಿಕಾಯಿ, ಪಿ.ಎಸ್.ಹೊಸಮನಿ, ಶಿವಾನಂದ ಹಗಟಗಿ, ಶಾಂತಾ ಚೌರಿ, ಮಂಜು ಕಲಾಲ, ಪ್ರಕಾಶ ಬೆಣ್ಣೂರ ಸೇರಿದಂತೆ ಮುಂತಾದವರು ಇದ್ದರು. ಶಿವಪ್ಪ ಮಡಿಕೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ರೇಶ ಹೆಗಡ್ಯಾಳ ಪ್ರಾರ್ಥಿಸಿದರು. ಬಿ.ವಿ.ಚಕ್ರಮನಿ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ ಚಿಂಚೋಳಿ ವಂದಿಸಿದರು.

Share this article