ನದಿ ತಿರುವು ವಿರುದ್ಧ ಹೋರಾಟಕ್ಕೆ ಗೆಲುವು ಸಿಗುವ ವಿಶ್ವಾಸ

KannadaprabhaNewsNetwork |  
Published : Oct 16, 2026, 02:30 AM IST
ಬೇಡ್ತಿ ನದಿ ತಿರುವು ಯೋಜನೆ ರಸ್ತೆ ತಡೆ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನ ವಜ್ರಳ್ಳಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ನದಿ ತಿರುವು ಯೋಜನೆ ಖಂಡಿತವಾಗಿಯೂ ವಿಫಲವಾಗುತ್ತದೆ. ಈ ಭಾಗದಲ್ಲಿ ಅನೇಕ ಯೋಜನೆಗಳ ಹೋರಾಟದ ಇತಿಹಾಸ ಇದೆ. ನಾವು ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ.

ಯಲ್ಲಾಪುರ: ನದಿ ತಿರುವು ಯೋಜನೆ ವಿರೋಧಿಸುವ ಸಂಕಲ್ಪದಿಂದ ನಡೆಸುತ್ತಿರುವ ಹೋರಾಟಕ್ಕೆ ಉತ್ತಮ ಫಲಿತಾಂಶ ಸಿಗುವ ವಿಶ್ವಾಸವಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ನ. ೩ರಂದು ಯಲ್ಲಾಪುರದಲ್ಲಿ ಹಮ್ಮಿಕೊಂಡಿರುವ ರಸ್ತೆ ತಡೆ ಸಿದ್ಧತೆ ಕುರಿತಾಗಿ ವಜ್ರಳ್ಳಿಯ ಸಹಕಾರಿ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಭಾವನಾತ್ಮಕವಾಗಿ ನಾವು ವಾಸಿಸುವ ನಮ್ಮ ಪರಿಸರದೊಂದಿಗೆ ಸಂಬಂಧವನ್ನು ಅಗಾಧವಾಗಿ ಇರಿಸಿಕೊಂಡಿದ್ದೇವೆ. ಈ ನೆಲದಲ್ಲಿ ಜೀವನ ಕಟ್ಟಲು ನಮ್ಮ ಹರಿವ ನೀರು ನಮ್ಮದೇ. ನಮ್ಮ ಬೇಡ್ತಿ ನದಿಗಳನ್ನು ತಿರುಗಿಸುವ ಯೋಜನೆ ಅವೈಜ್ಞಾನಿಕವಾದದ್ದು. ನಮ್ಮ ಜಿಲ್ಲೆಯ ಧಾರಣ ಶಕ್ತಿ ಕಡಿಮೆ ಇರುವ ಹೊತ್ತಿನಲ್ಲಿ ಹೊಸ ಯೋಜನೆಗಳು ಆತಂಕದ ನಡುವೆ ನಮ್ಮ ಕೂಗು ಸರ್ಕಾರಕ್ಕೆ ತಲುಪಿ ಯೋಜನೆ ಕೈಬಿಡಬೇಕು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ವೆಂಕಟ್ರಮಣ ಬೆಳ್ಳಿ ಮಾತನಾಡಿ, ನದಿ ತಿರುವು ಯೋಜನೆ ಖಂಡಿತವಾಗಿಯೂ ವಿಫಲವಾಗುತ್ತದೆ. ಈ ಭಾಗದಲ್ಲಿ ಅನೇಕ ಯೋಜನೆಗಳ ಹೋರಾಟದ ಇತಿಹಾಸ ಇದೆ. ನಾವು ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ. ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಬೇಡ್ತಿ ನದಿ ತಿರುವು ಯೋಜನೆಯನ್ನು ಕೂಡಾ ಸರ್ಕಾರ ಕೈಬಿಡಲೇಬೇಕು ಎಂದರು.

ಡಿ. ರವೀಂದ್ರ ಭಟ್ಟ ಹೊನಗದ್ದೆ ಮಾತನಾಡಿ, ಪರಿಸರ ಮಂತ್ರಾಲಯದ ಒಪ್ಪಿಗೆ ಪಡೆಯದೇ ಈ ಪರಿಸರಕ್ಕೆ ಮಾರಕವಾಗುವ ಯೋಜನೆ ತರಬಾರದು ಎಂದರು.

ನದಿ ತಿರುವು ಯೋಜನೆ ಸಂಘಟನೆಯ ಸಂಚಾಲಕ ಹಾಗೂ ಪತ್ರಕರ್ತ ನರಸಿಂಹ ಸಾತೊಡ್ಡಿ ಮಾತನಾಡಿ, ಕೈಗಾ, ಬೇಡ್ತಿ, ಕೊಡಸಳ್ಳಿ ಹೋರಾಟವು ನಮ್ಮ ಅನುಭವದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯವರಿಗೆ ಹೋರಾಟ ಹೊಸದಲ್ಲ. ಈ ನದಿ ತಿರುವು ಯೋಜನೆ ಕೈಬಿಡಲು ಈ ಭಾಗದ ಸ್ಥಳೀಯರು ಮನೆ ಮನೆಯಿಂದ ಕನಿಷ್ಠ ಮೂರು ಜನರಾದರೂ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಯಾಗಲು ಸಹಕಾರ ನೀಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಟಿ.ಸಿ. ಗಾಂವ್ಕರ ಮಾತನಾಡಿ, ಜನಪ್ರತಿನಿಧಿಗಳ ಟೀಕೆ ಮಾಡುವ ಬದಲು ಅವರ ಸಹಕಾರ ಪಡೆದು ಹೋರಾಟದ ಯಶಸ್ಸಿಗೆ ತೊಡಗಬೇಕು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವೆಂಕಟರಮಣ ಭಟ್ಟ ಕಿರುಕುಂಭತ್ತಿ ಮಾತನಾಡಿ, ಹೋರಾಟದ ಕೈಂಕರ್ಯಕ್ಕೆ ಅನೇಕರು ಕೈ ಜೋಡಿಸಿದ್ದಾರೆ. ಹೋರಾಟದಲ್ಲಿ ಪಾಲ್ಗೊಳ್ಳುವವರಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿ, ನ. ೩ರ ಹೋರಾಟ ಹಳ್ಳಿ ಹಳ್ಳಿಯ ಜನರ ಹಾಜರಾತಿ ಮೂಲಕ ಯಶಸ್ವಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿ.ಎಂ.ಎಸ್. ಅಧ್ಯಕ್ಷ, ಹೋರಾಟ ಸಮಿತಿಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸರ್ಕಾರದ ಉದ್ಯೋಗ ಭರವಸೆ ಯೋಜನೆಯ ಮುಂದುವರಿದ ಭಾಗವಾಗಿ ಅನಾವಶ್ಯಕವಾಗಿ ಉದ್ಯೋಗ ಖಾತರಿ ಸೃಷ್ಟಿಸಲು ಹೊಸ ಯೋಜನೆ ಅಸ್ತಿತ್ವಕ್ಕೆ ತರುತ್ತಿದೆ. ಜನಪ್ರತಿನಿಧಿಗಳ ಮದ್ದಾನೆಗೆ ಸ್ಥಳೀಯ ನಾಗರಿಕರು ಬಲವಾದ ಅಂಕುಶ ಹಾಕಿ ಮದ ಇಳಿಸಲು ಇದು ಸಕಾಲ. ನಮ್ಮ ಹೋರಾಟದ ಶಕ್ತಿ ಅಂದು ಪ್ರದರ್ಶನಗೊಳ್ಳಬೇಕು ಎಂದರು.

ಸ್ಥಳೀಯ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು. ಮಹೇಶ ಗಾಂವ್ಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರವೀಂದ್ರ ಗಾಂವ್ಕರ ಕಿರಗಾರಿಮನೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರನ್ನವರಾತ್ರಿ ನಿಮಿತ್ತ ದೇವಿ ವಜ್ರಾಭರಣಗಳ ಮೆರವಣಿಗೆ
ಶ್ರೀದೇವಿ ಪುರಾಣದ ತತ್ವ ಅಳವಡಿಕೆ ಬದುಕಿಗೆ ದಾರಿ