ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಿದ್ಯಾರ್ಥಿಗಳು ಬೆಳಗಿನ ಜಾವ ನಿಶ್ಯಬ್ಧ ವಾತಾವರಣದಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡುವುದರಿಂದ ಪರೀಕ್ಷೆಯನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ ಎಂದು ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವ್ಯವಸ್ಥಾಪಕ ಸಾಲಿಗ್ರಾಮ ಗಣೇಶ್ ಶಣೈ ಹೇಳಿದರು.ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಒಡೆಯರ ಹತ್ತೂರಿನ ಎಂ.ವಿ.ಸಿ.ಎಚ್.ಎಸ್. ಪ್ರೌಢ ಶಾಲೆಯಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿದರು.
ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡದೇ ಟೆನ್ಷನ್ ಮಾಡಿಕೊಂಡು ಒಮ್ಮೆಲೆ ಪರೀಕ್ಷೆ ಬರೆದರೆ ಅದು ನೆನಪಿನಲ್ಲಿ ಉಳಿಯುವುದಿಲ್ಲ. ಇದರಿಂದ ಪರೀಕ್ಷೆ ವೇಳೆ ಉತ್ತರಗಳನ್ನು ಸಮಂಜಸವಾಗಿ ಬರೆಯಲಾಗದೇ ವಿದ್ಯಾರ್ಥಿಗಳು ಫೇಲಾಗುತ್ತಾರೆ. ಶಾಲೆಗಳಲ್ಲಿ ಪ್ರತಿ ದಿನ ಪಾಠ ಪ್ರವಚನಗಳನ್ನು ಸರಿಯಾಗಿ ಆಲಿಸಿ ಮನೆಯಲ್ಲಿ ಅಭ್ಯಾಸ ಮಾಡುತ್ತಾ ಬಂದರೆ ಪರೀಕ್ಷೆ ವೇಳೆ ಯಾವುದೇ ಅಂತಕವಾಗುವುದಿಲ್ಲ ಎಂದು ಗಣೇಶ್ ಶಣೈ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ತಮ್ಮ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಇದುವರೆಗೂ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬರುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಸಹಾಯಧನ ಪಡೆಯದೇ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಪ್ರೋತ್ಸಾಹ ಪ್ರಶಸ್ತಿ ನೀಡುತ್ತಾ ಬರುತ್ತಿದೆ ಎಂದು ತಿಳಿದರು.
ಈ ವೇಳೆ ಎಸ್ ಎಸ್ ಎಲ್ ಸಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಕುಮಾರಿ ಮೋನಿಕಾ (125 ಅಂಕಗಳಿಗೆ 125 ಅಂಕ) ಹಾಗೂ ಕೆ.ಬಿ.ವರ್ಷಾ (125 ಅಂಕಗಳಿಗೆ 119 ಅಂಕ) ಅವರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಚನ್ನವೀರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್, ಸಂಚಾಲಕರಾದ ಕವಿತಾ ವೀರೇಶ್, ಶಿಕ್ಷಕರಾದ ಎಂ. ಕುಮಾರ್, ಸಂಪತ್ ಕುಮಾರ್, ಗುರುಪ್ರಸಾದ್, ಕಾವ್ಯಶ್ರೀ, ಅನಿತಾ, ನಾಗರತ್ನಾ, ಹರ್ಷಿತಾ, ವಿವೇಕ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.