ನದಿ, ಕೆರೆಗಳಿಂದ ನೀರೆತ್ತಿದರೆ ಪಂಪ್‌ಸೆಟ್‌ ಜಪ್ತಿ

KannadaprabhaNewsNetwork |  
Published : Apr 03, 2024, 01:33 AM IST
ಅಅಅ | Kannada Prabha

ಸಾರಾಂಶ

ಕೆರೆ ಹಾಗೂ ನದಿಗಳಲ್ಲಿ ಅನಧಿಕೃತ ಪಂಪ್‌ಸೆಟ್‌ ಮೂಲಕ ನೀರು ಎತ್ತುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಅವುಗಳನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಿ. ಅಗತ್ಯ ಬಿದ್ದರೆ ಪೊಲೀಸ್ ಇಲಾಖೆ ಸಹಾಯ ಪಡೆದು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆರೆ ಹಾಗೂ ನದಿಗಳಲ್ಲಿ ಅನಧಿಕೃತ ಪಂಪ್‌ಸೆಟ್‌ ಮೂಲಕ ನೀರು ಎತ್ತುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಅವುಗಳನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಿ. ಅಗತ್ಯ ಬಿದ್ದರೆ ಪೊಲೀಸ್ ಇಲಾಖೆ ಸಹಾಯ ಪಡೆದು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬರ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ತೊಂದರೆ ಕಂಡುಬರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಕೃಷ್ಣಾ ನದಿಯಲ್ಲಿ ಮತ್ತು ಕೆರೆಗಳಲ್ಲಿ ಅನಧಿಕೃತವಾಗಿ ಪಂಪ್‌ಸೆಟ್‌ಗಳಿಂದ ನೀರು ಎತ್ತಲಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು. ಅಥಣಿ, ಕಾಗವಾಡ ತಾಲೂಕುಗಳಲ್ಲಿ ಕುಡಿಯುವ ನೀರಿನ ತೊಂದರೆಯಿದೆ ಎಂದರು.

ಹೆಚ್ಚಿನ ಸಮಯ ತ್ರಿ-ಫೇಸ್ ವಿದ್ಯುತ್ ಪೂರೈಕೆಗೆ ರೈತರಿಂದ ಬೇಡಿಕೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ದಿನದಲ್ಲಿ 4 ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಒದಗಿಸಲು ಸೂಕ್ತವಾಗಿದೆ. ಮುಂದಿನ 10 ದಿನಗಳಿಗೆ ಮಾತ್ರ ವಾರದಲ್ಲಿ 4 ದಿನ 4 ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. 10 ದಿನಗಳಲ್ಲಿ ಮಹಾರಾಷ್ಟ್ರ ಜಲಾಶಯಗಳಿಂದ ನೀರು ಬಿಡುಗಡೆಯಾದರೆ ಯಾವುದೇ ತೊಂದರೆಯಿಲ್ಲ. ಒಂದು ವೇಳೆ ನೀರು ಬಿಡುಗಡೆಯಾಗದಿದ್ದರೆ ವಿದ್ಯುತ್ ಸರಬರಾಜು ಕುರಿತು 10 ದಿನಗಳ ನಂತರ ಜಲಾಶಯಗಳಲ್ಲಿನ ನೀರಿನ ಮಟ್ಟ ನೋಡಿಕೊಂಡು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿ ಪೂರೈಸಲಾಗುತ್ತಿದೆ. ಬೇಡಿಕೆಯಿರುವ ಪ್ರದೇಶಗಳನ್ನು ಗುರುತಿಸಿ ನೀರು ಸರಬರಾಜು ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ನೀರು ಸದ್ಬಳಕೆಯಾಗಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.

ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಡಾ.ಭೀಮಾಶಂಕರ ಗುಳೇದ, ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ.ಶ್ರೀನಿವಾಸ್, ಬೆಳಗಾವಿ ತಹಸೀಲ್ದಾರ್ ಸಿದ್ದರಾಯ ಭೋಸಗಿ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ ಕೂಲೇರ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುಲಕರ್ಣಿ ಸೇರಿ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಅಥಣಿ, ಚಿಕ್ಕೊಡಿ ತಾಲೂಕಿನಲ್ಲಿ ಈಗಾಗಲೇ ಟೆಂಡರ್ ಮೂಲಕ ಜಾನುವಾರುಗಳಿಗೆ ಮೇವು ಸರಬರಾಜು ಮಾಡಲಾಗುತ್ತಿದೆ. ಪ್ರತಿ ಕೆಜಿಗೆ ₹ 2 ರಂತೆ ರೈತರಿಗೆ ಮೇವು ಹಂಚಿಕೆ ಮಾಡಬೇಕು. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿದಲ್ಲಿ ಟ್ಯಾಂಕರ್ ಮ್ಯಾನೇಜ್ಮೆಂಟ್ ತಂತ್ರಾಂಶದ ಮೂಲಕ ಮಾತ್ರ ಹಣ ಪಾವತಿಸಬೇಕು ಎಂದು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರಿನ ತೊಂದರೆ, ಜಾನುವಾರುಗಳಿಗೆ ಮೇವು ಹಂಚಿಕೆ ಸೇರಿದಂತೆ ಬರ ನಿರ್ವಹಣೆಯಲ್ಲಿ ಯಾವುದೇ ತೊಂದರೆ ಎದುರಾಗಬಾರದು.

- ನಿತೇಶ ಪಾಟೀಲ,

ಜಿಲ್ಲಾಧಿಕಾರಿ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ