ಹೊಸಪೇಟೆ: ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಗೊಂದಲಕಾರಿ ನಿರ್ಣಯ ತೆಗೆದುಕೊಂಡಿದ್ದು, ಸಂವಿಧಾನದ 341ನೇ ವಿಧಿಗೆ ತಿದ್ದುಪಡಿ ತರಬೇಕು ಎಂದು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಕಪಟ ನಾಟಕ ಮಾಡುತ್ತಿದೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಈಗಿನ ಸರ್ಕಾರ ಬೆಂಬಲ ಪ್ರಕಟಿಸಿದ್ದರೆ ಸಾಕಿತ್ತು. ಇದರ ಬದಲಿಗೆ ದಿಕ್ಕು ತಪ್ಪಿಸಲು ಈ ಹುನ್ನಾರ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಬಲ್ಲಾಹುಣಸಿ ರಾಮಣ್ಣ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ದಲಿತರನ್ನು ವೋಟು ಬ್ಯಾಂಕಾಗಿ ಬಳಸಿಕೊಂಡು, ಕೊನೆಗೆ ಉಂಡೇನಾಮ ಹಾಕಿದೆ. ಅವರ ಕಪಟ ನೀತಿ ಬಯಲಿಗೆ ಬಂದಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದನ್ನುಈಗ ಮರೆತಿದೆ.ಅಪ್ರಸುತವಾಗಿರುವ ಸಂವಿಧಾನದ 341ನೇ ವಿಧಿಯ ತಿದ್ದುಪಡಿಯ ಗುಮ್ಮ ತೋರಿಸಿ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೆ. ಶೇ. 15ರ ಮೀಸಲಾತಿ ವರ್ಗೀಕರಿಸಿದ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಕೈಚೆಲ್ಲಿ ಕೂತಿದೆ. ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಮಾದಿಗ ದ್ರೋಹಿ ಕಾಂಗ್ರೆಸ್, ಈಗ 2008ರ ಉಷಾ ಮೆಹ್ರಾ ವರದಿ ಹೇಳಿದಂತೆ ಸಂವಿಧಾನದ 341ನೇ ವಿಧಿಗೆ ತಿದ್ದುಪಡಿ ತರಬೇಕು. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಬರೆಯುವುದಾಗಿ ಹೇಳುತ್ತಿದೆ. ಇದು ಕಪಟ ನಾಟಕವಾಗಿದೆ ಎಂದು ದೂರಿದರು.
2020ರ ಆಗಸ್ಟ್ 27ರಂದು ಸುಪ್ರೀಂಕೋರ್ಟಿನ ನ್ಯಾ. ಅರುಣ್ ಮಿಶ್ರಾ ನೇತೃತ್ವದ ಪಂಚಪೀಠ ಮೀಸಲಾತಿಯ ವರ್ಗೀಕರಣದಲ್ಲಿ 341ನೇ ವಿಧಿಯ ತಿದ್ದುಪಡಿಯ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾವ ನಾಯಕರಿಗೆ ಒಳ ಮೀಸಲಾತಿಯ ಕಾಳಜಿ ಇಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಈಗ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಇಬ್ಬರು ದಲಿತ ವಿರೋಧಿ ನಿಲುವು ತಳೆದಿದ್ದಾರೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಮಾಧುಸ್ವಾಮಿ ವರದಿಯಂತೆ ಒಳ ಮೀಸಲಾತಿ ವರ್ಗೀಕರಣ ಮಾಡಿದೆ. ಶೇ. 15ರಷ್ಟಿದ್ದ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಳ ಮಾಡಿದೆ. ಲಂಬಾಣಿ, ಬೋವಿ, ಕೊರಚ, ಕೊರಮ ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದರು.ಒಳ ಮೀಸಲಾತಿ ಹಂಚಿಕೆ ಮಾಡಿದರೆ ದಲಿತ ಸಮುದಾಯಕ್ಕೆ ನ್ಯಾಯ ದೊರೆಯಲಿದೆ. ಎಡ, ಬಲ ಎಲ್ಲರಿಗೂ ಒಳ ಮೀಸಲಾತಿಯಲ್ಲಿ ಸಮಾನ ನ್ಯಾಯ ಇದೆ. ಆದರೆ, ಈಗ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ನೀಚ ಕೃತ್ಯಕ್ಕೆ ಕೈ ಹಾಕಿದೆ. ಸಚಿವ ಸಂಪುಟದ ನಿರ್ಣಯವನ್ನು ಮಾದಿಗ ಸಮಾಜ ಧಿಕ್ಕರಿಸುತ್ತದೆ ಎಂದರು. ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡರಾದ ಜಿ.ಡಿ. ರಾಘವೇಂದ್ರ, ದುರುಗೇಶ್, ಕಣವಿಹಳ್ಳಿ ಮಂಜುನಾಥ, ಎಚ್. ರವಿಕುಮಾರ, ಮರಿಯಪ್ಪ, ಎ.ಕೆ. ರಾಮಣ್ಣ ಮತ್ತಿತರರಿದ್ದರು.