ವಕ್ಫ್‌ ಹೆಸರಲ್ಲಿ ಬಿಜೆಪಿಯಿಂದ ಗೊಂದಲ ಸೃಷ್ಟಿ

KannadaprabhaNewsNetwork |  
Published : Oct 30, 2024, 12:45 AM IST
ರೈತರಿಗೆ ಬಿಜೆಪಿ ನೀಡಿದ್ದ ನೊಟೀಸ್ ಪ್ರತಿಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್‌ ಮುಖಂಡರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್ ಹೆಸರಿನಲ್ಲಿ ಬಿಜೆಪಿಯವರು ರಾಜ್ಯದಲ್ಲಿ ಗೊಂದಲ‌ ಸೃಷ್ಟಿ ಮಾಡುತ್ತಿದ್ದು, ಕಾಂಗ್ರೆಸ್‌ನವರು ನೋಟಿಸ್‌ ಕೊಡುವ ಮೂಲಕ ರೈತರಿಗೆ ತೊಂದರೆ ಮಾಡುತ್ತಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದ ವೇಳೆ ರೈತರ ಜಮೀನುಗಳನ್ನು ವಾಪಸ್ ಪಡೆದು, ವಕ್ಫ್ ಆಸ್ತಿ ಎಂದು ಸೇರಿಸಿರುವ ಇತಿಹಾಸ ಇವೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಕ್ಫ್ ಹೆಸರಿನಲ್ಲಿ ಬಿಜೆಪಿಯವರು ರಾಜ್ಯದಲ್ಲಿ ಗೊಂದಲ‌ ಸೃಷ್ಟಿ ಮಾಡುತ್ತಿದ್ದು, ಕಾಂಗ್ರೆಸ್‌ನವರು ನೋಟಿಸ್‌ ಕೊಡುವ ಮೂಲಕ ರೈತರಿಗೆ ತೊಂದರೆ ಮಾಡುತ್ತಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದ ವೇಳೆ ರೈತರ ಜಮೀನುಗಳನ್ನು ವಾಪಸ್ ಪಡೆದು, ವಕ್ಫ್ ಆಸ್ತಿ ಎಂದು ಸೇರಿಸಿರುವ ಇತಿಹಾಸ ಇವೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾಗಿಯೂ ರೈತರಿಗೆ ಅನ್ಯಾಯ ಮಾಡಿದ್ದೇ ಬಿಜೆಪಿ. ತಮ್ಮ ಅವಧಿಯಲ್ಲಿ ರೈತರಿಗೆ ನೋಟಿಸ್‌ ಕೊಟ್ಟಿರುವ ಇವರು, ಈಗ ನಿಯೋಗದ ಮೂಲಕ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ವಕ್ಫ್‌ ವಿಚಾರದಲ್ಲಿ ಹೋರಾಟ ಮಾಡುವ ನೈತಿಕತೆಯೇ ಇವರಿಗೆ ಇಲ್ಲ ಎಂದು ಟೀಕಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಎಷ್ಟು ರೈತರಿಗೆ, ಸಾರ್ವಜನಿಕರಿಗೆ ನೋಟಿಸ್‌ ನೀಡಿದ್ದಾರೆ. ವಕ್ಫ್‌ ಕಾಯ್ದೆಗೆ ಸಂಬಂಧಿಸಿದಂತೆ ಎಷ್ಟು ಗೆಜೆಟ್ ನೋಟಿಫಿಕೇಷನ್‌ ಹೊರಡಿಸಿದ್ದಾರೆ? ಎಷ್ಟು ರೈತರು ಹಾಗೂ ಸಾರ್ವಜನಿಕರಿಗೆ ವಕ್ಫ್‌ ಆಸ್ತಿ ಎಂದು ಮರಳಿ ಪಡೆದಿದ್ದಾರೆ? ವಕ್ಪ್‌ ಆಸ್ತಿ ಸಂರಕ್ಷಿಸಲು ಖಾತೆಯ ಮಂತ್ರಿಗಳು ಎಷ್ಟು ಸಭೆ ನಡೆಸಿದ್ದಾರೆ? ಇದೆಲ್ಲದಕ್ಕೂ ಅವಹಾಲು ಸ್ವೀಕಾರ ಮಾಡಲು ಬಂದಿರುವ ತಂಡದವರು ಉತ್ತರಿಸಬೇಕು ಎಂದು ಆಗ್ರಹಿಸಿದ ಅವರು, ಬಿಜೆಪಿ ಆಡಳಿತದಲ್ಲಿ ವಕ್ಫ್‌ ಕಾಯ್ದೆಯ ಕುರಿತು ಏನೇನು ಕ್ರಮ ಕೈಗೊಂಡಿದ್ದಾರೆ ಎಂದು ಉತ್ತರ ಕೊಡದಿದ್ದರೆ ಇವರೆಲ್ಲ ನಾಟಕ ಮಾಡುತ್ತಿದ್ದಾರೆ ಎಂದು ರೈತರು ಹಾಗೂ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಬಿಜೆಪಿ ನಿಯೋಗ ಬಂದು ರೈತರಿಂದ ಮನವಿ ಸ್ವೀಕರಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅನೇಕ ಹಿಂದೂಗಳಿಗೆ ನೋಟಿಸ್‌ ಕೊಟ್ಟಿದ್ದಾರೆ. 2022 ಸೆಪ್ಟೆಂಬರ್ 14ರಿಂದ 2022 ನವೆಂಬರ್‌ 18 ರವರೆಗಿನ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲೇ ಬಿಜೆಪಿಯವರು 10ಕ್ಕೂ ಅಧಿಕ ಹಿಂದೂ ರೈತರಿಗೆ ನೋಟಿಸ್‌ ಕೊಟ್ಟಿದ್ದಾರೆ. ಈ‌ ಮೂಲಕ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕದಡುವ ಕೆಲಸ ಮಾಡುತ್ತಿದ್ದಾರೆ. ಅಹವಾಲು ಆಲಿಸಲು ಬಂದವರು ಬಿಜೆಪಿ ರಾಜ್ಯ ಸರ್ಕಾರದಲ್ಲಿ ಯಾವ ಯಾವ ಹುದ್ದೆಯಲ್ಲಿದ್ದೀರಿ ಎಂಬುದು ತಿಳಿಸಿ. ಅತ್ಯುತ್ತಮ ಸರ್ಕಾರ ನಡೆದಿದ್ದನ್ನು ಟೀಕಿಸಲು ವಿಷಯಗಳಿಲ್ಲದ್ದರಿಂದ ಈ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಕುತಂತ್ರ ಎಂದಿಗೂ ಸಫಲವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ಮಾತನಾಡಿ, 1954ರಲ್ಲಿ ವಕ್ಫ್‌ ಕಾನೂನು ಬಂದಿದೆ. ಆಗ ಬಿಜೆಪಿಯ ನಾಯಕರೆಲ್ಲರೂ ಸೇರಿ ತಪ್ಪು-ಸರಿಗಳನ್ನು ಪರಿಶೀಲಿಸಿಯೇ ವಕ್ಫ್‌ ಕಾನೂನು ಒಪ್ಪಿದ್ದಾರೆ. ಬಳಿಕ 1995 ಹಾಗೂ 2013ರಲ್ಲಿ ಹೊಸ ಕಾನೂನು ರಚನೆ ಆಗಿವೆ. ಆಗಲೂ ಬಿಜೆಪಿ ನಾಯಕರಾದ ಅಟಲ್‌ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸಂಸತ್ತಿನಲ್ಲಿ ಇದ್ದರು. ಹೀಗಿದ್ದಾಗ ವಕ್ಫ್‌ ಕಾನೂನಿನಿಂದ ಕಾನೂನು ಬಾಹಿರವಾಗಿ ಒಂದು ಇಂಚು ಭೂಮಿಯನ್ನು ಸಹ ವಕ್ಫ್‌ ಎಂದು ಮಾಡಲು ಸಾಧ್ಯವಿಲ್ಲ ಎಂದರು.ಈಗ ರೈತರಿಗೆ ತಿಳಿವಳಿಕೆ ನೋಟಿಸ್‌ ಕೊಡಲಾಗಿದೆ. ರೈತರು ಭೂ ಸುಧಾರಣೆ ಆಕ್ಟ್‌ನಲ್ಲಿ ಭೂಮಿ ಪಡೆದಿರುವುದು ಅಥವಾ ಮುತುವಲ್ಲಿಗಳು ಅವರಿಗೆ ಮಾರಾಟ ಮಾಡಿದ ದಾಖಲೆ ಕೊಟ್ಟರೆ ಆ ಜಮೀನು ವಾಪಸ್ ರೈತರ ಹೆಸರಿಗೆ ಆಗಲಿವೆ. ಅಷ್ಟಕ್ಕೂ ವಕ್ಫ್ ಆಸ್ತಿಗಳನ್ನು ತೆಗೆದುಕೊಳ್ಳಲು ವಕ್ಫ್‌ ಬೋರ್ಡ್‌ಗೆ ಯಾವುದೇ ಅಧಿಕಾರ ಇಲ್ಲ. ಎಲ್ಲವೂ ಆಯಾ ಜಿಲ್ಲಾಧಿಕಾರಿಗಳು ಹಾಗೂ ಆಯಾ ತಹಸೀಲ್ದಾರ್‌ಗಳ ಮೂಲಕವೇ ದಾಖಲೀಕರಣ ಮಾಡಬೇಕು ಎಂದು ತಿಳಿಸಿದರು.

---------------

ಕೋಟ್‌

ಜಿಲ್ಲೆಗೆ ಬಂದಿರುವ ಬಿಜೆಪಿ ನಿಯೋಗಕ್ಕೆ, ಶಾಸಕ ಯತ್ನಾಳ, ಚಕ್ರವರ್ತಿ ಸೂಲಿಬೆಲೆ, ಸಿ.ಟಿ.ರವಿ ಇವರಿಗೆಲ್ಲ ವಕ್ಪ್ ಎಂದರೇನು ಎಂಬುದೇ ಗೊತ್ತಿಲ್ಲ. ಕಾನೂನಿನ ಅರಿವು ಇಲ್ಲ. ಹಿಂದೂ- ಮುಸ್ಲಿಂ, ಪಾಕಿಸ್ತಾನ್‌ ಬಿಟ್ಟರೆ ಅವರಿಗೆ ಬೇರೆ ವಿಷಯಗಳು ಗೊತ್ತಿಲ್ಲ. ಬಂದು ರೈತರಿಂದ ಮನವಿ ಸ್ವೀಕರಿಸುವ ಕೆಲಸ ಮಾಡುತ್ತಿದ್ದಾರೆ.

ಮಲ್ಲಿಕಾರ್ಜನ್ ಲೋಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

---------------

ಬಿಜೆಪಿ ನೀಡಿದ್ದ ದಾಖಲೆಗಳ ಬಿಡುಗಡೆ

ಬಿಜೆಪಿ ಆಡಳಿತದಲ್ಲಿದ್ದಾಗ ವಕ್ಫ್‌ನಿಂದ ಸುಮಾರು 10ಕ್ಕೂ ಅಧಿಕ ಹಿಂದೂ ರೈತರಿಗೆ ನೋಟಿಸ್‌ ನೀಡಲಾಗಿತ್ತು. ಆ ದಾಖಲೆಗಳನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದರು. ಜೊತೆಗೆ ನೋಟಿಸ್‌ ಪಡೆದ ರೈತರಾದ ಆನಂದ ಹಡಪದ, ಅಶೋಕ ಬಣ್ಣದ, ಬಡೈಲ್ ಲಾಹೋರಿ, ಗೋವಿಂದ ಲಿಂಗಸಾ, ಗಿರಿಮಲ್ಲಪ್ಪ ಚನ್ನಾಳ, ಸಂಜಯಕುಮಾರ ಜೈನ್, ಮಹಾವೀರ ಶಂಕರಲಾಲ್, ರವಿ ಮಾದರ, ಬಸಪ್ಪ ಬಣಾರಿ, ಮಹಾಲಿಂಗಯ್ಯ ಹಿರೇಮಠ ಈ ರೈತರಿಗೆ ನೀಡಿದ ನೋಟಿಸ್‌ ಪ್ರತಿಗಳನ್ನು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಗಂಗಾಧರ ಸಂಬಣ್ಣಿ, ವಸಂತ ಹೊನಮೊಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ