ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷಾಕಾಂಕ್ಷಿ
ಕನ್ನಡಪ್ರಭವಾರ್ತೆ ತುರುವೇಕೆರೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷಾಕಾಂಕ್ಷಿಯಾಗಿರುವ ಸಿದ್ದಗಂಗಾ ಆಸ್ಪತ್ರೆಯ ವೈದ್ಯರಾದ ಡಾ.ಪರಮೇಶ್ವರಯ್ಯನವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಯುವ ಘಟಕದ ಅಧ್ಯಕ್ಷ ವೆಂಕಟಾಪುರ ಯೋಗೀಶ್ ದೂರಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯದಲ್ಲಿ ಒಗ್ಗಟ್ಟಿದೆ. ಇದೇ ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋಗಬೇಕೆಂದು ನಿರ್ಧರಿಸಿದ್ದ ಸಮುದಾಯ ಸ್ವಾಮೀಜಿಗಳು ಮತ್ತು ಮುಖಂಡರುಗಳು ಭಾನುವಾರ ನಡೆಯಲಿರುವ ಅಧ್ಯಕ್ಷರ ಚುನಾವಣೆ ನಡೆಯುವುದು ಬೇಡ. ಅಧ್ಯಕ್ಷ ಸ್ಥಾನಕ್ಕೆ ಪ್ರಭಲ ಆಕಾಂಕ್ಷಿಗಳಾಗಿರುವ ಸಿದ್ದಗಂಗಾ ಆಸ್ಪತ್ರೆಯ ವೈದ್ಯರಾದ ಡಾ.ಪರಮೇಶ್ವರಯ್ಯ ಮತ್ತು ಬಿಜೆಪಿಯ ವಕ್ತಾರರೂ ಹಾಗೂ ಉದ್ಯಮಿಗಳೂ ಆಗಿರುವ ಎಚ್.ಎನ್. ಚಂದ್ರಶೇಖರ್ ರವರ ಮನವೊಲಿಸಿ ಇಬ್ಬರಿಗೂ ತಲಾ ೨.೫ ವರ್ಷಗಳೆಂದು ತೀರ್ಮಾನಿಸಿದ್ದರು. ಮೊದಲ ಅಧ್ಯಕ್ಷರಾಗಿ ಡಾ.ಪರಮೇಶ್ವರಯ್ಯನವರೂ, ಎರಡನೇ ಅವಧಿಗೆ ಚಂದ್ರಶೇಖರ್ ಎಂದೂ ತೀರ್ಮಾನಿಸಿದ್ದರು.ಆದರೆ ಆ ವೇಳೆಗಾಗಲೇ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಗಿದಿತ್ತು. ಚುನಾವಣೆ ಅನಿವಾರ್ಯ ಎಂಬ ಪರಿಸ್ಥಿತಿ ಇತ್ತು. ಇದನ್ನು ಮನಗಂಡ ಚಂದ್ರಶೇಖರ್ ರವರು ಹಿರಿಯರ ಆಶಯದಂತೆ ತಮ್ಮ ಸ್ಪರ್ಧೆಯನ್ನು ಹಿಂದಕ್ಕೆ ಪಡೆದು ನಿವೃತ್ತಿ ಘೋಷಿಸುವುದಾಗಿ ಪ್ರಕಟಿಸಿದರು. ಆದರೆ ಡಾ.ಪರಮೇಶ್ವರಯ್ಯ ಮತ್ತು ಅವರ ಅನುಯಾಯಿಗಳು ಗುರುಹಿರಿಯರ ಮಾತನ್ನು ಧಿಕ್ಕರಿಸಿ ಚುನಾವಣೆಗೆ ಹೋಗಿರುವುದು ಖಂಡನೀಯ. ಸಮುದಾಯದ ಒಗ್ಗಟ್ಟನ್ನು ಮುರಿಯಬಾರದೆಂದು ಮಾರ್ಗದರ್ಶನ ನೀಡಿದ್ದ ಗುರುಹಿರಿಯರ ಮಾತನ್ನು ಮೀರಿ ಚುನಾವಣೆಗೆ ಸ್ಪರ್ಧಿಸಿರುವ ಡಾ.ಪರಮೇಶ್ವರಯ್ಯ ನವರಿಗೆ ಇದೇ 21 ರ ಭಾನುವಾರದಂದು ನಡೆಯಲಿರುವ ಚುನಾವಣೆಯಲ್ಲಿ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆಂದು ವೆಂಕಟಾಪುರ ಯೋಗೀಶ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೋಶಾಧ್ಯಕ್ಷ ತೀರ್ಥಕುಮಾರ್, ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಉಪಾಧ್ಯಕ್ಷರಾದ ದಿಲೀಪ್, ಪ್ರತೀಕ್, ಕಳ್ಳನಕೆರೆ ಶಿವರಾಜ್, ಪ್ರಧಾನ ಕಾರ್ಯದರ್ಶಿ ಬಸವೇಶ್, ಕಾರ್ಯದರ್ಶಿಗಳಾದ ಗುಣಶೇಖರ್, ಖಜಾಂಚಿ ನವೀನ್, ನಿರ್ದೇಶಕರಾದ ಅಶ್ವಿನ್, ಅರಳೀಕೆರೆ ಪಾಲನೇತ್ರ, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ನವೀನ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.