ಕವಿವಿ ಬಸವ ಪೀಠದ ಸಂಯೋಜಕರ ನೇಮಕದಲ್ಲೂ ಗೊಂದಲ!

KannadaprabhaNewsNetwork |  
Published : Jan 22, 2026, 02:30 AM IST
ಕೆಯುಡಿ | Kannada Prabha

ಸಾರಾಂಶ

ಧಾರವಾಡದ ಸಾಯಿ ಪಿಯು ಕಾಲೇಜಿನ ಮುಖ್ಯಸ್ಥರು ಹಾಗೂ ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅವರನ್ನು ಬಸವ ಪೀಠದ ಸಂಯೋಜಕರನ್ನಾಗಿ ನೇಮಿಸಿ ಇನ್ನೇನು ಅಧಿಕಾರ ಸ್ವೀಕರಿಸಬೇಕು ಎನ್ನುವಷ್ಟರಲ್ಲಿ ವಿಶ್ವವಿದ್ಯಾಲಯದ ಒಳ ರಾಜಕೀಯದಿಂದಾಗಿ ತಾಂತ್ರಿಕ ಸಮಸ್ಯೆ ನೆಪದಲ್ಲಿ ಆದೇಶ ತಡೆ ಹಿಡಿಯಲಾಗಿದೆ.

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಸೇರಿದಂತೆ ಹಲವು ಹುದ್ದೆಗಳಿಗೆ ರಾಜ್ಯ ಸರ್ಕಾರ ಬೆಳಗ್ಗೆ ಒಬ್ಬರನ್ನು ನೇಮಿಸಿ, ಸಂಜೆ ಮತ್ತೊಬ್ಬರಿಗೆ ಆದೇಶ ನೀಡಿ ಗೊಂದಲ ಸೃಷ್ಟಿಸಿದ್ದು ಒಂದೆಡೆಯಾದರೆ, ಇದೀಗ ವಿವಿಯ ಬಸವೇಶ್ವರ ಪೀಠದ ಸಂಯೋಜಕರ ನೇಮಕ ವಿಷಯದಲ್ಲೂ ಇಂತಹ ಗೊಂದಲವೊಂದು ಸೃಷ್ಟಿಯಾಗಿದೆ.ಇಲ್ಲಿಯ ಸಾಯಿ ಪಿಯು ಕಾಲೇಜಿನ ಮುಖ್ಯಸ್ಥರು ಹಾಗೂ ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅವರನ್ನು ಬಸವ ಪೀಠದ ಸಂಯೋಜಕರನ್ನಾಗಿ ನೇಮಿಸಿ ಇನ್ನೇನು ಅಧಿಕಾರ ಸ್ವೀಕರಿಸಬೇಕು ಎನ್ನುವಷ್ಟರಲ್ಲಿ ವಿಶ್ವವಿದ್ಯಾಲಯದ ಒಳ ರಾಜಕೀಯದಿಂದಾಗಿ ತಾಂತ್ರಿಕ ಸಮಸ್ಯೆ ನೆಪದಲ್ಲಿ ಆದೇಶ ತಡೆ ಹಿಡಿಯಲಾಗಿದೆ.

ಬಸವ ಪೀಠದ ಸಲಹಾ ಸಮಿತಿ ಸದಸ್ಯರು, ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ, ಈ ಹಿಂದಿನ ಪೀಠದ ಸಂಯೋಜಕ ಕುಂದಗೋಳ ಸೇರಿದಂತೆ ಸಮಿತಿ ಇತರೆ ಸದಸ್ಯರು, ಕುಲಸಚಿವರು ಹಾಗೂ ಕುಲಪತಿ ಸೇರಿ ಅರ್ಜಿ ಹಾಕಿದ 8 ಜನ ಸಂಯೋಜಕ ಆಕಾಂಕ್ಷಿಗಳನ್ನು ಕರೆಯಿಸಿ, ಸಂದರ್ಶನ ಮಾಡಿದ್ದರು. ಬಳಿಕ ಪೀಠದ ಅಭಿವೃದ್ಧಿ ದೃಷ್ಟಿಯಿಂದ ಡಾ. ವೀಣಾ ಬಿರಾದಾರ ಅವರನ್ನು ನೇಮಕ ಮಾಡಿ ಆದೇಶ ಸಹ ಹೊರಡಿಸಿ ಕೊನೆಗೆ ತಡೆ ಹಿಡಿಯಲಾಗಿದೆ.ವಿವಿ ಪ್ರಾಧ್ಯಾಪಕರೇ ಬೇಕಾ?

ವಿವಿಯಲ್ಲಿ ಹಲವು ಮಹನೀಯರ ಹೆಸರಿನ ಪೀಠಗಳಿದ್ದು, ವಿವಿ ಪ್ರಾಧ್ಯಾಪಕರು ಮಾತ್ರವಲ್ಲದೇ ಪೀಠದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ಮಾಡುವ ಹೊರಗಿನ ಅರ್ಹ ವ್ಯಕ್ತಿಗಳನ್ನು ಸಹ ನೇಮಿಸಿದ ಹಲವು ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ವಿವಿಯಲ್ಲಿಯ ಬೇರೆ ಬೇರೆ ವಿಭಾಗದ ಪ್ರಾಧ್ಯಾಪಕರನ್ನೇ ಬಸವ ಪೀಠಕ್ಕೆ ನೇಮಿಸಬೇಕು ಎಂಬ ಕೂಗು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.ತಮ್ಮ ವಿಭಾಗದ ಕಾರ್ಯ, ಕೆಲಸ ಬಿಟ್ಟು ಪೀಠದ ಕಾರ್ಯ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದನ್ನು ಯೋಜಿಸಬೇಕಾದ ಸಂಗತಿ. ಈಗಾಗಲೇ ವಿವಿ ಆರ್ಥಿಕ ಕೊರತೆಯಿಂದ ನಲಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು, ವಿವಿ ಪ್ರಾಧ್ಯಾಪಕರು ತಮ್ಮ ವಿಭಾಗ ಹಾಗೂ ತಮ್ಮ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಬಿಟ್ಟು ಪೀಠಗಳ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಇದರೊಂದಿಗೆ ಪೀಠದ ಸಂಯೋಜಕರ ಹುದ್ದೆಯು ಗೌರವಯುತ ಹುದ್ದೆ. ಹಣ, ಅಧಿಕಾರಕ್ಕಾಗಿ ಈ ಹುದ್ದೆ ಅಲಂಕರಿಸಿದೇ ಪೀಠದ ಅಭಿವೃದ್ಧಿ, ಸಂಶೋಧನೆ ಸೇರಿದಂತೆ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುವ ಕ್ರಿಯಾಶೀಲ ವ್ಯಕ್ತಿಯನ್ನು ಪೀಠಕ್ಕೆ ನೇಮಿಸಬೇಕು. ಅದಕ್ಕಾಗಿಯೇ ಸಲಹಾ ಸಮಿತಿ ರಚಿಸಿದ್ದು, ಸಲಹಾ ಸಮಿತಿ ನಿರ್ಣಯವೇ ಅಂತಿಮ ಆಗಬೇಕು. ಈ ವಿಷಯದಲ್ಲಿ ವಿವಿ ಒಳರಾಜಕೀಯ ನುಸುಳಬಾರದು ಎಂದು ವಿವಿಯ ವಿಶ್ರಾಂತ ಕುಲಪತಿಯೊಬ್ಬರು ಸದ್ಯದ ಕುಲಪತಿಗಳ ನಿರ್ಧಾರವನ್ನು ಪರೋಕ್ಷವಾಗಿ ಬೆಂಬಲಿಸಿದರು.ಕೋಟ್‌...ಬಸವಣ್ಣನವರ ವಿಚಾರಧಾರೆಗಳನ್ನು ಪರಿಣಾಮಕಾರಿಯಾಗಿ ಸಮಾಜಕ್ಕೆ ತಲುಪಿಸಲು ಹಾಗೂ ಸಂಶೋಧನೆಗಾಗಿ ಕರ್ನಾಟಕ ವಿವಿಯಲ್ಲಿ ಬಸವ ಪೀಠ ಮಹತ್ವದ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ 11 ತಿಂಗಳಿಂದ ಖಾಲಿ ಇದ್ದ ಪೀಠದ ಸಂಯೋಜಕರನ್ನು ಸಲಹಾ ಸಮಿತಿ ಸಮ್ಮುಖದಲ್ಲಿಯೇ ಸಂದರ್ಶನ ಮಾಡಿ ಡಾ.ವೀಣಾ ಬಿರಾದಾರ ಅವರನ್ನು ನೇಮಿಸಿ ಆದೇಶ ಮಾಡಲಾಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ಆದೇಶ ತಡೆ ಹಿಡಿಯಲಾಗಿದೆ.

ಪ್ರೊ. ಎ.ಎಂ. ಖಾನ್‌, ಕುಲಪತಿಗಳು, ಕವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ