ಕನ್ನಡ ನಾಗರಾಜುಗೆ 75 ವರ್ಷ ಹಿನ್ನೆಲೆ ಕನ್ನಡಪರ ಸಂಘದಿಂದ ಅಭಿನಂದನೆ

KannadaprabhaNewsNetwork | Published : Feb 26, 2024 1:33 AM

ಸಾರಾಂಶ

ತಾಲೂಕಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕಳೆದ 4 ದಶಕಗಳಿಂದ ನಿರಂತರ ಸೇವೆಯಲ್ಲಿ ತೊಡಗಿರುವ ಕನ್ನಡ ನಾಗರಾಜು ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಕೂಟ ಮತ್ತು ಕನ್ನಡಪರ ಸಂಘ ಸಂಸ್ಥೆಗಳ ಸದಸ್ಯರು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆ

ತಾಲೂಕಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕಳೆದ 4 ದಶಕಗಳಿಂದ ನಿರಂತರ ಸೇವೆಯಲ್ಲಿ ತೊಡಗಿರುವ ಕನ್ನಡ ನಾಗರಾಜು ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಕೂಟ ಮತ್ತು ಕನ್ನಡಪರ ಸಂಘ ಸಂಸ್ಥೆಗಳ ಸದಸ್ಯರು ಅಭಿನಂದಿಸಿದರು. ಹಿರಿಯ ಸಾಹಿತಿ ಶಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಾಗರಾಜು ಮನೆಗೆ ಆಗಮಿಸಿದ್ದ ತಾಲೂಕಿನ ಸಾಹಿತಿಗಳು, ಸಂಘಟಕರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ನಾಗರಾಜು ಅವರ ಕನ್ನಡ ಪರಿಚಾರಕತ್ವದ ಸೇವೆಯನ್ನು ಸ್ಮರಿಸಿದರು. ಸಾಹಿತಿ ಶಿ. ಕುಮಾರಸ್ವಾಮಿ ಮಾತನಾಡಿ, ಕನ್ನಡಪರ ಕಾರ್ಯಕ್ರಮಗಳು ಎಲ್ಲಿಯೇ ಇರಲಿ ಅಲ್ಲಿ ನಾಗರಾಜು ಅವರ ಉಪಸ್ಥಿತಿ ಇರುತ್ತದೆ. ತಾಲೂಕಿನಲ್ಲಿ ಕನ್ನಡಪರ ಸಂಘಟನೆಗಳು ಹಮ್ಮಿಕೊಳ್ಳುವ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಶಾಲೆಗೊಂದು ಕಾರ್ಯಕ್ರಮ, ರಾಜ್ಯೋತ್ಸವ ಹೀಗೆ ಯಾವುದೇ ಕೆಲಸವನ್ನು ವಹಿಸಿದರೂ ನಾಗರಾಜು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ ಎಂದರು.

ನಾಗರಾಜುಗೆ 75 ವರ್ಷ ತುಂಬಿದ್ದು, ಈ ವಯಸ್ಸಿನಲ್ಲಿಯೂ ಹೆಗಲಲ್ಲಿ ಬ್ಯಾಗು ಹಾಕಿಕೊಂಡು ಕನ್ನಡ ಕಾರ್ಯಕ್ರಮಗಳಿಗೆ ಹಾಜರಾಗುವ ಅವರ ಕನ್ನಡ ಪ್ರೇಮ ಪ್ರಶ್ನಾತೀತ. ಅವರಿಗೆ ಇನ್ನು ಹೆಚ್ಚಿನ ಕನ್ನಡ ಸೇವೆ ಮಾಡುವ ಆರೋಗ್ಯ ದೊರೆಯಲಿ ಎಂದು ಆಶಿಸಿದರು. ಕನ್ನಡ ನಾಗರಾಜು ಒಡನಾಡಿ ಪುರಸಭೆ ಮಾಜಿ ಸದಸ್ಯ ರಾಮಚಂದ್ರು, ಬಾಲ್ಯದ ಒಡನಾಟ ಮತ್ತು ಪಟ್ಟಣದಲ್ಲಿ ಕನ್ನಡ ಕಾರ್ಯಕ್ರಮ ನಡೆಸಲು ಪಟ್ಟ ಶ್ರಮ ನೆನಪಿಸಿಕೊಂಡರು.

ಸಮಾರಂಭದಲ್ಲಿ ಗ್ರಾಮಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಿ. ಕಿರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಹೊಳೇನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ಅಧಿಕಾರಿ ಬಳ್ಳೇಕೆರೆ ಮಂಜುನಾಥ್, ಸಾಹಿತಿಗಳಾದ ಬಲ್ಲೇನಹಳ್ಳಿ ಮಂಜುನಾಥ್, ಮಾರೇನಹಳ್ಳಿ ಲೊಕೇಶ್, ಚಾ.ಶಿ. ಜಯಕುಮಾರ್, ವಜ್ರಪ್ರಸಾದ್, ತಮ್ಮಯ್ಯಚಾರ್ ಸೇರಿದಂತೆ ಹಲವರು ಇದ್ದರು.

Share this article