ಕನ್ನಡಪ್ರಭ ವಾರ್ತೆ ಮೈಸೂರು
ಯಾದವಗಿರಿಯ ಚಾಮುಂಡಿ ಕ್ಲಬ್ ನಲ್ಲಿ ನಡೆದ ಅದ್ಧೂರಿ ಅಭಿನಂದನಾ ಸಮಾರಂಭದಲ್ಲಿ ಸುರಕ್ಷತಾ ಸಂಬಂಧಿತ ವಿಭಾಗಗಳಲ್ಲಿನ ಟ್ರ್ಯಾಕ್ (ಹಳಿ) ನಿರ್ವಾಹಕರು, ಸಂವಹನ ನಿರ್ವಾಹಕರು, ಪಾಯಿಂಟ್ಸ್ ಮನ್, ಪಾಯಿಂಟ್ಸ್ ವುಮನ್, ಲೋಕೋ ಪೈಲಟ್ ಗಳು, ರೈಲು ವ್ಯವಸ್ಥಾಪಕರು ಮತ್ತು ವಿವಿಧ ವಿಭಾಗಗಳ ಎಂಜಿನಿಯರ್ ಗಳಂತಹ 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶ್ಲಾಘನೀಯ ಸೇವೆಯನ್ನು ಸಲ್ಲಿಸಿರುವ 38 ಸಮರ್ಪಿತ ಸಿಬ್ಬಂದಿಯನ್ನು ಗೌರವಿಸಲಾಯಿತು.
ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಇದ್ದರು.ಅವರು ತಮ್ಮ ಭಾಷಣದಲ್ಲಿ, ರೈಲ್ವೆ ಸಂಘಟನೆಯ ಯಶಸ್ಸಿನಲ್ಲಿ ಕಾರ್ಮಿಕರ ಪ್ರಮುಖ ಪಾತ್ರದ ಬಗ್ಗೆ ತಿಳಿಸಿದರು. ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಸೌಹಾರ್ಧಯುತ ಮತ್ತು ಸಹಯೋಗದ ವಾತಾವರಣ ಬೆಳೆಸುವ ಪ್ರಾಮುಖ್ಯತೆ ಬಗ್ಗೆ ಅವರು ಒತ್ತಿಹೇಳಿದರು. ಇದು ಅಭಿವೃದ್ಧಿ ಹೊಂದುತ್ತಿರುವ ಎಲ್ಲಾ ಸಂಸ್ಥೆಗಳ ಮೂಲಾಧಾರ ಎಂದು ಅವರು ವಿವರಿಸಿದರು.
ಅವರು ಮೈಸೂರು ವಿಭಾಗದ ಸಿಬ್ಬಂದಿ ಪ್ರದರ್ಶಿಸಿದ ಸಮರ್ಪಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿ, ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಸಕಾರಾತ್ಮಕ ಕೆಲಸದ ಸಂಸ್ಕೃತಿ ಬೆಳೆಸಲು ಅವರು ನೀಡುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನಾಯಕ ನಾಯಕ್, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ವಿಷ್ಣುಗೌಡ, ಗತಿ ಶಕ್ತಿ ಘಟಕದ ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ ಭಾರತಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಲೋಹಿತೇಶ್ವರ ಮತ್ತು ಇತರ ಶಾಖೆಗಳ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.