ಜಯದೇವ ಆಸ್ಪತ್ರೆ ರೋಗಿಗಳ ಪಾಲಿಗೆ ಕಲ್ಪವೃಕ್ಷವಾಗಲಿ: ಡಾ.ಸಿ.ಎನ್. ಮಂಜುನಾಥ್

KannadaprabhaNewsNetwork |  
Published : Feb 24, 2024, 02:34 AM IST
36 | Kannada Prabha

ಸಾರಾಂಶ

ನನಗೊಂದು ಕನಸಿತ್ತು ಈ ಆಸ್ಪತ್ರೆಯನ್ನು ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಪಂಚತಾರಾ ಹೋಟೆಲ್‌ ನಂತೆ ನಿರ್ವಹಣೆ ಮಾಡಬೇಕು ಎಂದು ಆ ಕನಸು ನನಸಾಗಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಮಾದರಿಯಾಗಿ ಇಟ್ಟುಕೊಂಡು ಆಸ್ಪತ್ರೆಗಳನ್ನು ನಿರ್ವಹಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಮಾತಾಡಿದ್ದಾರೆ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಜಯದೇವ ಹೃದ್ರೋಗ ಆಸ್ಪತ್ರೆ ಕಳೆದ 18 ವರ್ಷಗಳಲ್ಲಿ ಶೇ.500 ರಷ್ಟು ಪ್ರಗತಿ ಸಾಧಿಸಿದ್ದು, ಈ ಆಸ್ಪತ್ರೆ ರೋಗಿಗಳ ಪಾಲಿಗೆ ಕಾಮಧೇನು. ಕಲ್ಪವೃಕ್ಷ ಆಗಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಜಯದೇವ ಆಸ್ಪತ್ರೆಯಲ್ಲಿ ಗುರುವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು 2006 ರಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ ಹೂವಿನ ಹಾಸಿಗೆ ಆಗಿರಲಿಲ್ಲ. ನನ್ನ ಮೇಲು ಸಹ ಕೆಲವರು ಕಲ್ಲು ಇಟ್ಟಿಗೆಯನ್ನು ಎಸೆದರು. ನಾನು ಧೃತಿಗೆಡದೆ ಅದೇ ಕಲ್ಲು, ಇಟ್ಟಿಗೆಯಿಂದ ಸಂಸ್ಥೆಯನ್ನು ಕಟ್ಟಿದ್ದೇವೆ ಎಂದರು.

ನನಗೊಂದು ಕನಸಿತ್ತು ಈ ಆಸ್ಪತ್ರೆಯನ್ನು ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಪಂಚತಾರಾ ಹೋಟೆಲ್‌ ನಂತೆ ನಿರ್ವಹಣೆ ಮಾಡಬೇಕು ಎಂದು ಆ ಕನಸು ನನಸಾಗಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಮಾದರಿಯಾಗಿ ಇಟ್ಟುಕೊಂಡು ಆಸ್ಪತ್ರೆಗಳನ್ನು ನಿರ್ವಹಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಮಾತಾಡಿದ್ದಾರೆ ಎಂದು ಅವರು ಹೇಳಿದರು.

ನಾನು ಮೈಸೂರು ಜಯದೇವ ಆಸ್ಪತ್ರೆಗೆ ನಿರ್ಮಾಣ ಹಂತದಲ್ಲಿ 73 ಬಾರಿ ಭೇಟಿ ಮಾಡಿ ಪರಿಶೀಲಿಸಿ, ನನ್ನ ಸ್ವಂತ ಮನೆ ಕಟ್ಟಿಸಿದ ಹಾಗೆ ಕಟ್ಟಿಸಿದ್ದೇನೆ. ಆಸ್ಪತ್ರೆಯ ಕಟ್ಟಡ ಉಪಕರಣಗಳಿಂದ ಮಾತ್ರ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹೃದಯವಂತಿಕೆ ಇರಬೇಕು. ಅವಕಾಶ ಸಿಕ್ಕಾಗ ಜನರಿಗೆ ಎಷ್ಟು ಸಹಾಯ ಮಾಡಬೇಕೋ ಅಷ್ಟು ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ನಾನು ನಿರ್ದೇಶಕನಾಗಿ, ಡಾಕ್ಟರ್ ಆಗಿ ಎಂಜಿನಿಯರ್ ಆಗಿ ಕೌನ್ಸಲರ್ ಆಗಿ ಈ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ನಾವು ಯಾವುದನ್ನು ನೋಡಿದರೆ ಸಕಾರಾತ್ಮಕವಾಗಿ ನೋಡಬೇಕು. ಇಂದು ಸಂಬಂಧಗಳ ಕೊರೆತೆ ಇದೆ. ಸಂಬಂಧಗಳು ಯಾವಾಗಲೂ ಹಸಿರಾಗಿರಬೇಕು. ಬುದ್ಧಿವಂತಿಕೆ ಇದ್ದರೆ ಸಾಲದು, ಹೃದಯವಂತಿಕೆ ಇರಬೇಕು. ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು ಎಂದರು.

ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ. ಟೀಕೆಗಳು ಸಾಯುತ್ತವೆ, ಸಾಧನೆಗಳು ಅಮರವಾಗಿ ಉಳಿಯುತ್ತವೆ. ಜಯದೇವ ಆಸ್ಪತ್ರೆ ಜನರ ವಿಶ್ವಾಸಗಳಿಸಿದೆ. ಮೈಸೂರು ಜಯದೇವ ಆಸ್ಪತ್ರೆ ಕಳೆದ 13 ವರ್ಷಗಳಿಂದ ಡಾ. ಸದಾನಂದ್ ನೇತೃತ್ವದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಸಿಬ್ಬಂದಿ ಪ್ರೀತಿ, ವಿಶ್ವಾಸದಿಂದ ಕೆಲಸಮಾಡಿ, ರೋಗಿಗಳನ್ನು ದೇವರೆಂದು ತಿಳಿದು ತಾಯಿ ಹೃದಯದಿಂದ ಕೆಲಸಮಾಡಿ. ಇದುವರೆಗೆ ನನಗೆ ಸಹಕರಿಸಿದ ಎಲ್ಲಾ ಸರ್ಕಾರಗಳು, ಮುಖ್ಯಮಂತ್ರಿಗಳು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತಿದ್ದೇನೆ ಎಂದರು.

ಆದಿಚುಂಚನಗಿರಿ ವಿವಿ ಕುಲಪತಿ ಡಾ. ಶೇಖರ್, ಡಾ. ಅನುಸೂಯ ಮಂಜುನಾಥ್, ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕಿ ಡಾ. ದಾಕ್ಷಾಯಿಣಿ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ಚಿಕ್ಕತಿಮ್ಮಯ್ಯ ಮಾತನಾಡಿದರು.

ಆಸ್ಪತ್ರೆಯ ಡಾ.ಕೆ.ಎಸ್. ಸದಾನಂದ್, ಡಾ. ದೇವರಾಜು, ಡಾ. ಶ್ವೇತಾ ಸದಾನಂದ್, ಡಾ. ಹರ್ಷಾ ಬಸಪ್ಪ, ಡಾ. ಸಂತೋಷ್, ಡಾ. ವೀಣಾ ನಂಜಪ್ಪ, ಡಾ.ಎಸ್. ಹೇಮಾ, ಡಾ. ಮಧುಪ್ರಕಾಶ್, ಡಾ. ಭಾರತಿ, ಡಾ. ವಿಶ್ವನಾಥ್, ಡಾ. ಅಶ್ವಿನಿ, ಡಾ. ಜಯಪ್ರಕಾಶ್, ಡಾ. ಶ್ರೀನಿಧಿ ಹೆಗ್ಗಡೆ, ಡಾ. ರಶ್ಮಿ, ಆರ್.ಎಂ.ಒ. ಡಾ. ಪಶುಪತಿ, ನರ್ಸಿಂಗ್ ಅಧೀಕ್ಷಕ ಹರೀಶ್ ಕುಮಾರ್. ಪಿ.ಆರ್.ಒ. ವಾಣಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ