ಶೇಷಮೂರ್ತಿ ಅವಧಾನಿ
ಲೋಕಸಭೆ ಸಮರದ ಬೆನ್ನಲ್ಲೇ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಶಾನ್ಯ ಪದವೀಧರ ಮತಕ್ಷೇತ್ರವನ್ನು ಪರಿಷತ್‌ನಲ್ಲಿ ಪ್ರತಿನಿಧಿಸುವ ಸಲುವಾಗಿ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಸೆಣಸಾಟ ಶುರುವಾಗಿದೆ.
ಜೂ.3ರಂದು ಮತದಾನ ನಿಗದಿಯಾಗಿರುವ ಈಶಾನ್ಯ ಪದವೀಧರ ರಣಕಣದಲ್ಲೀಗ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ ನಡೆಯಲಿದೆ.ಏತನ್ಮಧ್ಯೆ ಇಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯ ಕರಗಿ ಹೋಗಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು, ಬಿಜೆಪಿ ಮುಖಂಡ ಸುರೇಶ ಸಜ್ಜನ್ ತಮಗೆ ಟಿಕೆಟ್ ಕೈ ತಪ್ಪಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರಾದರೂ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ನಾಮಪತ್ರ ವಾಪಸ್‌ಗೆ ನಿರ್ಧರಿಸಿದ್ದಾರೆ.
2018ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದ ಡಾ. ಚಂದ್ರಶೇಖರ ಪಾಟೀಲ್, ಮೊದಲ ಬಾರಿಗೆ ಬಿಜೆಪಿಯಿಂದ ಈಶಾನ್ಯ ಕ್ಷೇತ್ರವನ್ನ ಕೈವಶ ಮಾಡಿಕೊಂಡಿದ್ದರು.
ಆದಾಗ್ಯೂ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ, ಅದರಲ್ಲೂ ಪದವೀಧರ ಯುವಕರಿಗೆ ನೀಡಿರುವ ಯುವನಿಧಿಯಂತಹ ಯೋಜನೆಗಳೇ ತಮ್ಮ ಗೆಲುವಿಗೆ ಈ ಬಾರಿ ಶ್ರೀರಕ್ಷೆಯಾಗಲಿವೆ ಎಂದು ಡಾ. ಪಾಟೀಲ್ ಈಶಾನ್ಯ ಪದವೀಧರ ಮತಕ್ಷೇತ್ರ ಕೈ ಬಿಟ್ಟು ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳುವ ಹುಮ್ಮಸ್ಸಲಿದ್ದಾರೆ.
2012ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿದ್ದ ಅಮರನಾಥ ಪಾಟೀಲರಿಗೆ 2018ರಲ್ಲಿ ಪಕ್ಷ ಟಿಕೆಟ್ ನೀಡಿರಲಿಲ್ಲ. ಇವರ ಸ್ಥಾನದಲ್ಲಿ ಬಳ್ಳಾರಿಯವರೊಬ್ಬರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿತ್ತಾದರೂ ಗೆಲ್ಲಲಾಗದೆ ಕೈ ಚೆಲ್ಲಿದ್ದು ಇತಿಹಾಸ.
ಹೆಚ್ಚಿದ ಮತದಾರರ ಸಂಖ್ಯೆ: ಕಾಡುತ್ತಿರುವ ಸಮಸ್ಯೆಗಳೆಲ್ಲದಕ್ಕೂ ಪರಿಹಾರ ಸಿಗುತ್ತದೆಂಬ ಭರವಸೆ ಪದವೀಧರರಿಗಿಲ್ಲವಾದರೂ ಜ್ವಲಂತ ಹಾಗೂ ಹೆಚ್ಚು ಜನರಿಗೆ ಬಾಧಿಸುತ್ತಿರುವ ಸಮಸ್ಯೆಗಳಿಗಾದರೂ ಗೆದ್ದವರು ಸದನದ ಒಳಗೆ ಹೊರಗೆ ಧ್ವನಿ ಎತ್ತಬೇಕು, ಅಂತಹವರಿಗೆ ನಾವು ಗೆಲ್ಲಿಸುತ್ತೇವೆಂದು ಪದವೀಧರರು ಸಜ್ಜಾಗಿದ್ದಾರೆ.
ಪದವೀಧರರ ಸಮಸ್ಯೆಗಳು ನೂರಾರು- ಸ್ಪಂದಿಸುವರೆ ಗೆದ್ದವರು?:
ಕಲ್ಯಾಣ ನಾಡಿಗೆ ಕಲಂ 371 (ಜೆ) ಅನ್ವಯವಾಗಿ ದಶಕ ಕಳೆದರೂ ಉದ್ಯೋಗ, ಶಿಕ್ಷಣ, ಅಭಿವೃದ್ಧಿ ಅನುದಾನದ ವಿಚಾರದಲ್ಲಿ ಈ ಕಲಂ ಅನ್ವಯ ಯಾವುದೂ ಕೆಲಸವಾಗುತ್ತಿಲ್ಲ. ಅನುಷ್ಠಾನದಲ್ಲಿ ಸಾಕಶ್ಟು ಸಮಸ್ಯೆಗಳಿರುವ ಈ ವಿಚಾರದಲ್ಲಿ ಪದವೀಧರರು ತೊಂದರೆ ಅನುಭವಿಸುತ್ತಿದ್ದಾರೆ.
ಖಾಲಿ, ಬ್ಯಾಕ್ ಲಾಗ್ ಭರ್ತಿ, ಶಿಕ್ಷಕರ ಕೊರತೆ ನೀಗಿಸುವುದು, ವೇತನ ತಾರತಮ್ಯ ನಿವಾರಣೆ, ಹಳ ಪಿಂಚಣಿ ಯೋಜನೆ ಜಾರಿ ಮಾಡುವ ಬೇಡಿಕೆ, ಪದವೀಧರರಿಗೆ ನಿರುದ್ಯೋಗ ಭತ್ಯೆ ಜಾರಿಗೊಳಿಸುವುದು, ವಿವಿ ಖಾಲಿ ಶಿಕ್ಷಕರ ಹುದ್ದೆ ಭರ್ತಿಯಂತಹ ಜ್ವಂಲತ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಪದವೀಧರರೆಂದರೆ ವಿದ್ಯಾವಂತ ಮತದಾರರು, ಇವರನ್ನೇ ತಿಕ್ಕಿಮುಕ್ಕುತ್ತಿರುವ ನೂರಾರು ಸಮಸ್ಯೆಗಳಿಗೆ ಈ ಕ್ಷೇತ್ರದಿಂದ ಗೆದ್ದವರು ಸ್ಪಂದಿಸುವರೆ? ಎಂಬುದೇ ಈಗಿನ ಪ್ರಶ್ನೆಯಾಗಿದೆ.ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ:
ಸದ್ಯಕ್ಕಂತೂ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಹಣಾಹಣಿ ಕಂಡಿದೆ. ಜೆಡಿಎಸ್ ದೋಸ್ತಿ ಈ ಕಣದಲ್ಲಿಯೂ ಮುಂದುವರಿದಿರೋದು ಬಿಜೆಪಿಗೆ ತುಸು ಅನುಕೂಲವಾಗಲಿದೆ. ಕ್ಷೇತ್ರ ರಚನೆಯಾದಾಗಿನಿಂದ ಡಾ. ಎಂ.ಆರ್. ತಂಗಾ ಅವರೇ ಸತತ 3 ಬಾರಿ ಈ ಕ್ಷೇತ್ರವನ್ನ ಪರಿಷತ್‌ನಲ್ಲಿ ಪ್ರತಿನಿಧಿಸಿ ಸೈ ಎನ್ನಿಸಿಕೊಂಡಿದ್ದರು. ನಂತರದಲ್ಲಿ ಮನೋಹರ ಮಸ್ಕಿ ಇಲ್ಲಿಂದ ಮೇಲ್ಮನೆಗೆ ಪ್ರವೇಶಿಸಿದ್ದರು. ಇದಾದ ನಂತರ ಅಮರನಾಥ ಪಾಟೀಲ್ 2012ರಲ್ಲಿ ಗೆದ್ದು ಬೀಗಿದ್ದರು. ನಂತರ 2018ರಲ್ಲಿ ಬಿಜೆಪಿ ಈ ಕ್ಷೇತ್ರ ಬೀದರ್ ಮೂಲದ ಡಾ. ಚಂದ್ರಶೇಖರ ಅವರಿಗೆ ಒಲಿದಿತ್ತು. 2014ರಲ್ಲಿ ಮತ್ತೆ ಹಣಾಹಣಿ ಜೋರಾಗಿ ಕಂಡು ಬಂದಿದೆ. ಬೀದರ್‌ನ ಚಂದ್ರಶೇಖರ ಪಾಟೀಲ್ ಪುನರಾಯ್ಕೆ ಬಯಸಿ ಕಣದಲ್ಲಿದ್ದರೆ, ಬಿಜೆಪಿಯ ಅಮರನಾಥ ಪಾಟೀಲ್ ಕೈತಪ್ಪಿರೋ ಕ್ಷೇತ್ರ ಮರುವಶಕ್ಕೆ ಮುಂದಾಗಿದ್ದಾರೆ.