ದಲಿತರಿಗೆ ದ್ರೋಹ ಮಾಡಿದ ಕಾಂಗ್ರೆಸ್‌, ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Mar 2, 2025 1:15 AM

ಸಾರಾಂಶ

ದಲಿತರನ್ನು ರಕ್ಷಿಸಬೇಕಾದ ಸರ್ಕಾರ ಆ ಸಮುದಾಯಗಳಿಗೆ ಮೀಸಲಿಟ್ಟ ಅನುದಾನದಲ್ಲಿಯೇ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿ ಯೋಜನೆಗೆ ಬಜೆಟ್‌ನಲ್ಲಿ ₹ 54000 ಕೋಟಿ ಮೀಸಲಿಡುವುದಾಗಿ ಹೇಳಿತ್ತು. ಆ ಹಣ ಗ್ಯಾರಂಟಿಗೆ ಬಳಸಿಕೊಳ್ಳದೆ ಇದೀಗ ದಲಿತರಿಗೆ ಮೀಸಲಿಟ್ಟ ಹಣ ಬಳಿಸಿಕೊಳ್ಳುವ ಮೂಲಕ ದ್ರೋಹ ಮಾಡಿದೆ.

ಕೊಪ್ಪಳ:

ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ನಗರದಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿತು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಇಲ್ಲಿನ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿತು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಈ ವೇಳೆ ಮಾತನಾಡಿದ ಚಲುವಾದಿ ನಾರಾಯಣ ಸ್ವಾಮಿ, ದಲಿತರನ್ನು ರಕ್ಷಿಸಬೇಕಾದ ಸರ್ಕಾರ ಆ ಸಮುದಾಯಗಳಿಗೆ ಮೀಸಲಿಟ್ಟ ಅನುದಾನದಲ್ಲಿಯೇ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿ ಯೋಜನೆಗೆ ಬಜೆಟ್‌ನಲ್ಲಿ ₹ 54000 ಕೋಟಿ ಮೀಸಲಿಡುವುದಾಗಿ ಹೇಳಿತ್ತು. ಆ ಹಣ ಗ್ಯಾರಂಟಿಗೆ ಬಳಸಿಕೊಳ್ಳದೆ ಇದೀಗ ದಲಿತರಿಗೆ ಮೀಸಲಿಟ್ಟ ಹಣ ಬಳಿಸಿಕೊಳ್ಳುವ ಮೂಲಕ ದ್ರೋಹ ಮಾಡಿದೆ ಎಂದು ದೂರಿದರು.

ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ವಿವಿಧ ಇಲಾಖೆಗಳ ಹಣ ಲೂಟಿ ಮಾಡಿ ಗ್ಯಾರಂಟಿಗಳಿಗೆ ಕೊಡುತ್ತಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಇದೊಂದು ಜನ ವಿರೋಧಿ, ಜನಪರ ಕಾಳಜಿ ಇಲ್ಲದ ಸರ್ಕಾರವಾಗಿದೆ ಎಂದು ಕಿಡಿಕಾರಿದರು.

ಶಾಸಕ ಗಾಲಿ ಜನಾರ್ದನ ರಡ್ಡಿ ಮಾತನಾಡಿ, ದಲಿತರ ಕಣ್ಣೀರಿನಿಂದ ಕೆಲವೇ ತಿಂಗಳಲ್ಲಿ ಈ ಸರ್ಕಾರ ಪತನವಾಗಲಿದೆ. ಮುಖ್ಯಮಂತ್ರಿಗಳು ಆಡಳಿತ ಮಾಡಲು ಯೋಗ್ಯರಲ್ಲ. ರೈತರನ್ನು ದರೋಡೆ ಮಾಡಿದ ಸರ್ಕಾರ ಯಾವುದೇ ಸಂದರ್ಭದಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.

ಎಂಎಲ್‌ಸಿ ಹೇಮಲತಾ ನಾಯಕ ಮಾತನಾಡಿ, ಈ ಸರ್ಕಾರದ ಬಳಿ ವಿಷ ಕುಡಿಯಲು ಹಣವಿಲ್ಲ. ಇದೊಂದು ಪಾಪರ ಸರ್ಕಾರವೆಂದು ದೂರಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಮಾತನಾಡಿ, ಜನರ ವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಸರ್ಕಾರ ಬೆಲೆ ತೆತ್ತಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ದುರ್ಯೋಧನ ಐಹೊಳೆ, ವೈ. ಸಂಪಂಗಿ, ಮಾಜಿ ಸಚಿವ ಶಿವನಗೌಡ ನಾಯಕ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಕೆ.ಎಸ್. ದಿವಾಕರ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಮಹಾಂತೇಶ ಪಾಟೀಲ್ ಮೈನಳ್ಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

Share this article