ಚಾಮರಾಜನಗರದಲ್ಲಿ ಕಾಂಗ್ರೆಸ್- ಬಿಜೆಪಿ ಜಿದ್ದಾಜಿದ್ದಿ

KannadaprabhaNewsNetwork | Published : Jun 4, 2024 12:31 AM

ಸಾರಾಂಶ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಹಾಲಿ ಬಿಜೆಪಿ ವಶದಲ್ಲಿದ್ದ ಕ್ಷೇತ್ರವನ್ನು ಮತ್ತೇ ತನ್ನ ವಶ ಆಗಲಿದೆ ಎಂಬುದು ಕೈ ಪಾಳೇಯದ ವಿಶ್ವಾಸವಾದರೇ ಕ್ಷೇತ್ರದಲ್ಲಿ ಎರಡನೇ ಬಾರಿ ಕಮಲ ಅರಳಲಿದೆ ಎಂಬುದು ಬಿಜೆಪಿಗರ ಮಾತಾಗಿದೆ.

ದೇವರಾಜು ಕಪ್ಪಸೋಗೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಹಾಲಿ ಬಿಜೆಪಿ ವಶದಲ್ಲಿದ್ದ ಕ್ಷೇತ್ರವನ್ನು ಮತ್ತೇ ತನ್ನ ವಶ ಆಗಲಿದೆ ಎಂಬುದು ಕೈ ಪಾಳೇಯದ ವಿಶ್ವಾಸವಾದರೇ ಕ್ಷೇತ್ರದಲ್ಲಿ ಎರಡನೇ ಬಾರಿ ಕಮಲ ಅರಳಲಿದೆ ಎಂಬುದು ಬಿಜೆಪಿಗರ ಮಾತಾಗಿದೆ.

ಮೋದಿ ಅಲೆ- ಸಿದ್ದರಾಮಯ್ಯ ಹವಾ ಎರಡರ ನಡುವೆ ಜಂಗಿಕುಸ್ತಿ ನಡೆದಿರುವುದರಿಂದ ರಾಜ್ಯದ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಚಾಮರಾಜನಗರ ಕೂಡ ಒಂದಾಗಿದೆ.

ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್​ನಿಂದ ಸಚಿವ ಎಚ್.ಸಿ.ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಕಣಕ್ಕಿಳಿದಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಬಿಜೆಪಿಯ ಓರ್ವ ಶಾಸಕನೂ ಇಲ್ಲದಿರುವುದು, ಸಿದ್ದರಾಮಯ್ಯರ ವರುಣ ಕ್ಷೇತ್ರಕ್ಕೆ ಒಳಪಟ್ಟಿರುವುದು ಹಾಗೂ ಗ್ಯಾರಂಟಿಗಳ ಮಹಿಮೆಯಿಂದ ಕಾಂಗ್ರೆಸ್ ಗೆಲ್ಲಲ್ಲಿದೆ ಎಂಬುದು ಕೈ ಪಕ್ಷದ ವಿಶ್ವಾಸವಾಗಿದೆ.

ಮೋದಿ ನಾಮಬಲ ಹಾಗೂ ಬಾಲರಾಜು ಸಜ್ಜನ ರಾಜಕಾರಣಿ ಎಂಬ ದಿಸೆಯಲ್ಲಿ ಮತಗಳು ಸಿಕ್ಕು ಕಮಲ ಅರಳುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ.ಚಾ.ನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದೆ. ಕಾಂಗ್ರೆಸ್‌ನ 7 ಹಾಗೂ ಜೆಡಿಎಸ್‌ನ ಓರ್ವ ಶಾಸಕರು ಕ್ಷೇತ್ರದಲ್ಲಿದ್ದಾರೆ.

ಚಾ.ನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 14 ಮಂದಿ ಕಣದಲ್ಲಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಕಳೆದ ಚುನಾವಣೆಯಲ್ಲಿ ಬಿಎಸ್ಪಿ ಉತ್ತಮ ಸ್ಪರ್ಧೆ ಒಡ್ಡಿದ್ದರಿಂದ ಈ ಬಾರಿ ಆನೆಯ ಮತ ಗಳಿಕೆಯೂ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬಿಜೆಪಿ ಅಭ್ಯರ್ಥಿಯಾಗಿರುವ ಬಾಲರಾಜು ಅವರು ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದು 1991ರಲ್ಲಿ ಮುತ್ಸದ್ದಿ ರಾಜಕಾರಣಿ ಎಂ.ರಾಜಶೇಖರಮೂರ್ತಿ ಅವರ ಗರಡಿಯಿಂದ ಬಂದ ರಾಜಕಾರಣಿಯಾಗಿದ್ದಾರೆ. ರಾಜಶೇಖರಮೂರ್ತಿ ಶಿಷ್ಯನಾಗಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದು ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅದಾದ ಬಳಿಕ, 1993 ರಲ್ಲಿ ಟಿಎಪಿಎಂಎಸ್ ನಿರ್ದೇಶಕರಾಗಿ ಆಯ್ಕೆಯಾಗಿ 1997ರಲ್ಲಿ ಯುವ ಕಾಂಗ್ರೆಸ್ ಚಾಮರಾಜನಗರ ವಿಭಾಗದ ಅಧ್ಯಕ್ಷರಾದರು. 1999ರಲ್ಲಿ ರಾಜಶೇಖರಮೂರ್ತಿ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡು ಕೊಳ್ಳೇಗಾಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 5421 ಮತಗಳಿಂದ ಸೋಲು ಕಂಡರು.

ಅದೇ ವರ್ಷ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ-ಜೆಡಿಯು ಹೊಂದಾಣಿಕೆ ನಡುವೆ ಟಿಕೆಟ್ ಕೈ ತಪ್ಪಿದ್ದರಿಂದ 2004 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಮೊದಲ ಬಾರಿಗೆ ಶಾಸಕರಾದರು.

2013 ರಲ್ಲಿ ಯಡಿಯೂರಪ್ಪ ಅವರನ್ನು ಹಿಂಬಾಲಿಸಿ ಕೆಜೆಪಿ ಸೇರಿದ ಬಾಲರಾಜು ಮತ್ತೇ ಚುನಾವಣೆಗೆ ನಿಂತು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 2013 ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಸೇರ್ಪಡೆಗೊಂಡು ಎನ್.ಮಹೇಶ್ ಪರ ಪ್ರಚಾರ ನಡೆಸಿದ್ದರು. ವಿಧಾನಸಭಾ ಚುನಾವಣೆಯಾದ ಬಳಿಕ ಲೋಕಸಭಾ ಟಿಕೆಟ್‌ನ ಪ್ರಭಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಬಾಲರಾಜು ಅವರಿಗೆ ಹೈಕಮಾಂಡ್ ಒಲವು ತೋರಿ ಟಿಕೆಟ್ ಕೊಟ್ಟಿದೆ.

ಮೊದಲ ಬಾರಿ ಕಣಕ್ಕೆ: ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸುನಿಲ್ ಬೋಸ್ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರ ಪುತ್ರರಾಗಿದ್ದು ತಂದೆಯ ಗರಡಿಯಲ್ಲಿ ರಾಜಕೀಯದಲ್ಲಿ ಪಳಗಿದ್ದಾರೆ. ಉಪ ಚುನಾವಣೆಗಳಲ್ಲಿ ಪಕ್ಷದ ಜವಾಬ್ದಾರಿ ನಿರ್ವಹಿಸಿ ಮೊದಲ ಬಾರಿ ಲೋಕ ಅಖಾಡದಿಂದ ಚುನಾವಣಾ ರಾಜಕೀಯಕ್ಕೆ ಎಂಟ್ರಿ‌ ಕೊಟ್ಟಿದ್ದು ಬಿಜಿಪಿ ಅಭ್ಯರ್ಥಿಗೆ ಪ್ರಭಲ ಪೈಪೋಟಿ ಕೊಟ್ಟಿದ್ದಾರೆ.

ಮತದಾನದ ವಿವರ: ಏ.26 ರಂದು ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಚುನಾವಣೆ ನಡೆದಿದ್ದು ಶೇ. 76.81 ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8,78,702 ಪುರುಷರು, 8,99,501 ಮಹಿಳೆಯರು, 107 ಇತರರು ಸೇರಿದಂತೆ ಒಟ್ಟು 17,78,310 ಮತದಾರರಿದ್ದಾರೆ. ಈ ಪೈಕಿ 6,82,961 ಪುರುಷರು, 6,82,952 ಮಹಿಳೆಯರು, 31 ಇತರೆ ಮಂದಿ ಸೇರಿದಂತೆ ಒಟ್ಟು 13,65,944 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

2019 ರ ಚುನಾವಣಾ ಫಲಿತಾಂಶ:

2019ರಲ್ಲಿ ಎರಡು ಬಾರಿ ಸಂಸದರಾಗಿದ್ದ ಆರ್.ಧ್ರುವನಾರಾಯಣ ಕಾಂಗ್ರೆಸ್‌ನಿಂದ ಹಾಗೂ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸಿ ತೀವ್ರ ಜಿದ್ದಾಜಿದ್ದಿ ಮತಯುದ್ಧದಲ್ಲಿ ವಿ.ಶ್ರೀನಿವಾಸ ಪ್ರಸಾದ್ ಗೆದ್ದಿದ್ದರು. ಆ ಮೂಲಕ, ಚಾಮರಾಜನಗರದಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು.

Share this article