ಗಂಗಾವತಿ: ಧರ್ಮಸ್ಥಳಕ್ಕೆ ಕಾಂಗ್ರೆಸ್ ಕಳಂಕ ತಂದಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆದು ನಿಜಾಂಶ ಹೊರಬರುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ಲಕ್ಷಾಂತರ ಭಕ್ತರ ಮನಸ್ಸನ್ನು ಘಾಸಿಗೊಳಿಸಿದ್ದಾರೆಂದು ಕಿಡಿಕಾರಿದರು. ನಗರದ ಹಿಂದೂ ಮಹಾಮಂಡಳ ಪ್ರತಿಷ್ಠಾಪಿಸಿದ ಗಣೇಶ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ನಾಯಕರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರವೋ, ಸೌಜನ್ಯ ಪರವೋ ಎಂದು ಸಿಎಂ ಹೇಳುತ್ತಿದ್ದಾರೆ. ಆದರೆ, ನಾವು ನ್ಯಾಯದ ಪರವಾಗಿದ್ದೇವೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸರಿಯಾದ ದಾಖಲೆಗಳು ಇಲ್ಲದ ಕಾರಣ ಆತನನ್ನು ಬಿಡುಗಡೆ ಮಾಡಿದ್ದರು. ಈ ವಿಷಯ ಸಿದ್ದರಾಮಯ್ಯಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಯಾರ್‍ಯಾರು ಭಾಗಿಯಾಗಿದ್ದಾರೆಂಬುದು ತನಿಖೆಯಿಂದ ಹೊರಬಿದ್ದಿದೆ. ಇದರಲ್ಲಿ ಗಿರೀಶ ಮಟ್ಟಣನವರ ಮತ್ತು ಮಹೇಶ ತಿಮರೋಡಿ ಪ್ರಮುಖರಾಗಿದ್ದಾರೆ ಎಂದರು. ಈ ಮೊದಲು ಮಟ್ಟಣನವರ ಯಾವ ಪಕ್ಷದಲ್ಲಿ ಇದ್ದರು ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ. ರವಿ, ಮಟ್ಟಣನವರ ಹಾಗೂ ಮಹೇಶ ತಿಮರೋಡಿ ನಮ್ಮ ಪಕ್ಷದವರಲ್ಲ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದ ಇವರ ವಿರುದ್ಧ ಯಾವುದೇ ಕ್ರಮಕೈಗೊಂಡರೂ ಪಕ್ಷಕ್ಕೆ ಸಂಬಂಧವಿಲ್ಲ ಎಂದರು.
ಪಾಕಿಸ್ತಾನ್ ಜಿಂದಾಬಾದ್ ಎಂದರೆ ಖುಷಿ: ರಾಜ್ಯದಲ್ಲಿ ಜಾತ್ಯತೀತ ಕನಸು ಕಾಣುತ್ತಿರುವ ಕಾಂಗ್ರೆಸ್‌ಗರು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದರೆ ಬಹಳ ಖುಷಿಪಡುತ್ತಾರೆ. ಒಂದು ವೇಳೆ ಭಾರತ್ ಮಾತಾಕೀ ಜೈ, ನಮಸ್ತೆ ಸದಾ ವತ್ಸಲೆ ಎಂದರೆ ಕ್ಷಮೆ ಕೇಳುವ ಪರಿಸ್ಥಿತಿ ಕಾಂಗ್ರೆಸ್ ನಾಯಕರಿಗೆ ಬಂದಿದೆ. ಇದೇನಾ ಕಾಂಗ್ರೆಸ್ ಸಂಸ್ಕೃತಿ ಎಂದು ಪ್ರಶ್ನಿಸಿದ ರವಿ, ಕಾಂಗ್ರೆಸ್‌ನಲ್ಲಿ ಹಿಂದೂಗಳು ಇಲ್ಲವೇ, ಇವರಿಗೆ ದೇಶ ಪ್ರೇಮ ಇಲ್ಲವೇ ಎಂದು ಪ್ರಶ್ನಿಸಿದರು.
ಇತ್ತೀಚಿಗೆ ಕೊಪ್ಪಳದಲ್ಲಿ ನಡೆದ ಗವಿಸಿದ್ದಪ್ಪ ನಾಯಕ ಕೊಲೆ ಸೇರಿದಂತೆ ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಕೊಲೆ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕಾನೂನು ಚಟುವಟಿಕೆ ನಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೇಟ್ ಅಳವಡಿಸಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕ್ಯಾಪ್ಟರ್ ಖರೀದಿಸುವುದನ್ನು ಬಿಟ್ಟು ಮೊದಲು ತುಂಗಭದ್ರಾ ಜಲಾಶಯದ ಗೇಟ್‌ಗಳ ದುರಸ್ತಿ ಹಾಗೂ ರಾಜ್ಯದ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರಬೇಕು. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಮುರಿದು ವರ್ಷ ಕಳೆದರೂ ದುರಸ್ತಿ ಮಾಡದೆ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದೆ. ತಕ್ಷಣ ದುರಸ್ತಿಗೊಳಿಸಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಎರಡನೇ ಬೆಳೆಗೆ ನೀರು ಪೂರೈಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ. ರಸ್ತೆಗಳಲ್ಲಿ ನೂರಾರು ಗುಂಡಿಗಳು ಬಿದ್ದರೂ ಅವುಗಳಿಗೆ ಹಿಡಿ ಮಣ್ಣು ಹಾಕಿ ದುರಸ್ತಿ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಗ್ರಾಮಸ್ಥರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ್ ಕ್ಯಾಟವರ್, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಎಚ್.ಎಂ. ಸಿದ್ದರಾಮಸ್ವಾಮಿ, ವೀರಭದ್ರಪ್ಪ ನಾಯಕ, ನಗರಸಭಾ ಸದಸ್ಯ ವಾಸುದೇವ ನವಲಿ, ಚೆನ್ನಪ್ಪ ಮಳಗಿ ಇದ್ದರು.