ದೇಶ ಕಟ್ಟಿದ್ದು ಕಾಂಗ್ರೆಸ್‌, ಕ್ರೆಡಿಟ್‌ ಮಾತ್ರ ಬಿಜೆಪಿಗಾ ?: ಪ್ರದೀಪ್ ಈಶ್ವರ್

KannadaprabhaNewsNetwork |  
Published : May 05, 2024, 02:07 AM IST
ಫೋಟೊ:೦೪ಕೆಪಿಸೊರಬ-೦೨ : ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾದಿಗೆ ಶಾಸಕ ಪ್ರದೀಪ್ ಈಶ್ವರ್ ನಮನ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ಶಾಸಕ ಪ್ರದೀಪ್ ಈಶ್ವರ್ ನಮನ ಸಲ್ಲಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗಕಾಂಗ್ರೆಸ್‌ನವರು ಕಟ್ಟಿದ ಮನೆಗೆ ಬಿಜೆಪಿಯವರು ಸುಣ್ಣ, ಬಣ್ಣ ಹೊಡೆದು ಮನೆ ಕಟ್ಟಿದ್ದು ನಾವೇ ಎಂದು ಬಿಂಬಿಸಲು ಹೊರಟ್ಟಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ನವರು ಏನೂ ಮಾಡೇ ಇಲ್ಲ ಎನ್ನುವ ರೀತಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ತರದೇ ಹೋಗಿದ್ದರೆ ಇವತ್ತು ದೇಶ ಇಷ್ಟೊಂದು ಅಭಿವೃದ್ಧಿಯಾಗಲು ಸಾಧ್ಯವಾಗುತ್ತಿತ್ತಾ? ಒಂದು ಹೈವೇ ರಸ್ತೆ ಮಾಡಿ ದೇಶದ ಅಭಿವೃದ್ಧಿ ಎನ್ನುವ ಮೊದಲು ಕಾಂಗ್ರೆಸ್‌ ಸರ್ಕಾರ ಎಷ್ಟು ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ ಮಾಡಿದೆ ಎಂದು ತಿಳಿದುಕೊಳ್ಳಲಿ ಎಂದು ಕುಟುಕಿದರು.ಮೋದಿ ಬಂದ ಬಳಿಕ ಶೌಚಾಲಯ ನಿರ್ಮಾಣವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಯಾರು ಶೌಚಾಲಯವೇ ಬಳಸುತ್ತಿರಲಿಲ್ವಾ? ಅಣ್ಣಾಮಲೈ ಅವರು ಕಾಂಗ್ರೆಸ್‌ನವರು ಏನೂ ಮಾಡಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಏನೂ ಅಭಿವೃದ್ಧಿಯಾಗಿದೆ. ಬಿಜೆಪಿ ಸರ್ಕಾರದ ಏನೂ ಅಭಿವೃದ್ಧಿ ಮಾಡಿದೆ ಎನ್ನುವ ಚರ್ಚೆಗೆ ನಾನು ಸಿದ್ಧನಿದ್ದೇನೆ. ವೈಯಕ್ತಿಕ ತೇಜೋವಧೆ ಬಿಟ್ಟು ಚರ್ಚೆಗೆ ಬನ್ನಿ ಎಂದು ಕರೆ ನೀಡಿದರು.

ಬಿಜೆಪಿಯವರು ಬಡವರಿಗೆ ಕೊಡುವ ಅಕ್ಕಿಯಲ್ಲೂ ರಾಜಕೀಯ ಮಾಡಿದವರು. ರಾಜ್ಯಕ್ಕೆ ಬರ ಪರಿಹಾರ ನೀಡಿದೆ ಅನ್ಯಾಯ ಮಾಡಿದವರು. ಈಗ ಈ ದೇಶದಲ್ಲಿ ಎಲ್ಲವೂ 2014ರ ನಂತರವೇ ಆಯಿತೆಂದು ಬಿಂಬಿಸುತ್ತಿದ್ದಾರೆ ಎಂದು ಚಾಟಿ ಬೀಸಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಬಾರಿ ಸಂಸದರಾದ ರಾಘವೇಂದ್ರ ಅವರು ಯಾವ ಅಭಿವೃದ್ಧಿಯೂ ಮಾಡಿಲ್ಲ. ಅಭಿವೃದ್ಧಿ ಎಂದರೆ ಬರೀ ರಸ್ತೆ , ಬ್ರಿಡ್ಜ್ ಮಾಡುವುದು ಮತ್ತು ಸ್ವಂತಕ್ಕೆ ಆಸ್ತಿ ಮಾಡುವುದಲ್ಲ. ಜಿಲ್ಲೆಯಲ್ಲಿ ಕಾಡುತ್ತಿರುವ ಭೂಮಿಯ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಒಮ್ಮೆಯೂ ಮಾತನಾಡಲಿಲ್ಲ. ರೈತರಿಗೆ ಸಮಸ್ಯೆಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿಲ್ಲ ಎಂದ ಅವರು, ಶಿವಮೊಗ್ಗವನ್ನು ಅಷ್ಟೊಂದು ಅಭಿವೃದ್ಧಿ ಮಾಡಿದ್ದೇವೆ ಎನ್ನುವವರು ಮೋದಿ ಹೆಸರಿನಲ್ಲಿ ಯಾಕೆ ಮತ ಕೇಳಬೇಕು ಎಂದು ಹರಿಹಾಯ್ದರು.

ಪಕ್ಷದ ಅಭ್ಯರ್ಥಿ ಗೀತಾ ಅವರು ದೊಡ್ಮೆನೆ ಸೊಸೆಯಾಗುವ ಮೊದಲು ಬಂಗಾರಪ್ಪ ಅವರ ಪುತ್ರಿ. ಈ ಮಣ್ಣಿನ ಮಗಳಾಗಿರುವ ಅವರು ದಿಟ್ಟ ಮಹಿಳೆಯಾಗಿದ್ದಾರೆ. ಸಂಸದರಾಗಿ ಶಿವಮೊಗ್ಗ ಜನತೆಗೆ ಖಂಡಿತಾ ನ್ಯಾಯ ಕೊಡುತ್ತಾರೆ. ಈ ಬಾರಿ ರಾಘವೇಂದ್ರ ಅವರ ಸೋಲು ಖಚಿತ, ಗೀತಾ ಅವರ ಗೆಲುವು ನಿಶ್ಚಿತ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಕ್ತಾರ ಅನಿಲ್ ತಡಕಲ್, ಪ್ರಮುಖರಾದ ಚಂದ್ರ ಭೂಪಾಲ್, ರಮೇಶ್ ಇಕ್ಕೇರಿ, ಜಿ.ಡಿ. ಮಂಜು ನಾಥ್, ಜಿತೇಂದ್ರ ಗೌಡ, ಎಲ್. ಸತ್ಯನಾರಾಯಣ ರಾವ್ ಇತರರಿದ್ದರು.ದೊಡ್ಮನೆ ಕುಟುಂಬದ ಗೀತಕ್ಕ ಗೆಲುವು ಗ್ಯಾರಂಟಿ: ಶಾಸಕ

ಕನ್ನಡಪ್ರಭ ವಾರ್ತೆ ಸೊರಬ

ತಾವು ದೊಡ್ಮನೆ ಕುಟುಂಬದ ಅಭಿಮಾನಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಗೀತಾ ಪರವಾಗಿ ಮತಯಾಚಿಸಲು ಬಂದಿದ್ದೇನೆ. ಬಡವರ ಕಂಬನಿ ಒರೆಸುತ್ತಿರು ವುದು ಕಾಂಗ್ರೆಸ್ ಆದರೆ, ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಸುಳ್ಳಿನ ಭರವಸೆ ನೀಡಿ ಜನತೆಗೆ ಖಾಲಿ ಚೊಂಬು ನೀಡಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದರು.

ಶನಿವಾರ ಪಟ್ಟಣದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿದ ನಂತರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರ ಜತೆಗೆ ಹಳ್ಳಿ ಕಟ್ಟಿದ್ದು, ಶಾಲೆ, ಊರು, ಆಸ್ಪತ್ರೆ, ಗ್ರಾ.ಪಂ. ಕಟ್ಟಡ ಕಟ್ಟಿದ್ದು, ಐಎಟಿ, ಏಮ್ಸ್, ಎಲ್.ಐ.ಸಿ. ಇಸ್ರೋ, ನ್ಯಾಸಾ ಸೇರಿದಂತೆ ದೇಶದ ಉನ್ನತೀಕರಣಕ್ಕೆ ಶ್ರಮಿಸಿ ಜಾರಿಗೆ ತಂದಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಏನೂ ಮಾಡದೇ ಬಿಲ್ಡಪ್ ತೆಗೆದುಕೊಳ್ಳುತ್ತಿದೆ. ಒಟ್ಟಾರೆ ರಾಜ್ಯಕ್ಕೆ ಬಿಜೆಪಿ ಕೊಡುಗೆ ಚೊಂಬು ಎಂದು ಕಿಡಿಕಾರಿದರು.

ಸಾಮಾಜಿಕ ನ್ಯಾಯದ ಅಡಿಯಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಅವಕಾಶ ಸಿಗುತ್ತೆ ಎನ್ನುವ ನಂಬಿಕೆ ಇರಲಿಲ್ಲ. ಆದರೆ ಕಾಂಗ್ರೆಸ್ ಅವಕಾಶ ನೀಡಿದ್ದರಿಂದ ಚಿಕ್ಕಬಳ್ಳಾಪುರದಲ್ಲಿ ಗೆಲುವು ಸಾಧಿಸಿದ್ದೇನೆ. ತಾವು ರಾಜಕಾರಣಕ್ಕೆ ಬರುವುದಕ್ಕೂ ಮೊದಲು ದೊಡ್ಮನೆ ಕುಟುಂಬದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ಹಾಗಾಗಿ ಗೀತಾಕ್ಕ ಆವರ ತಮ್ಮನಾಗಿ ಪ್ರಚಾರಕ್ಕೆ ಬಂದಿದ್ದೇನೆ. ಗೆಲುವು ಸಾಧಿಸುವುದು ಗ್ಯಾರಂಟಿ ಎಂದರು.

ಶಿವಮೊಗ್ಗ ವಿಚಾರವಂತರ ಜಿಲ್ಲೆ. ಶಿವಮೊಗ್ಗಕ್ಕೆ ಎಸ್.ಬಂಗಾರಪ್ಪ ಬೆಲೆ ಕಟ್ಟಲಾಗದ ಆಸ್ತಿ. ಬಡವರು ಮತ್ತು ಬಗರ್‌ ಹುಕುಂ ಪರವಾದ ಅವರ ಹೋರಾಟ ಎಂದಿಗೂ ಅವಿಸ್ಮರ ಣೀಯ. ಅವರ ಚಿಂತನೆ ಮತ್ತು ರಾಜಕೀಯ ಪಟ್ಟುಗಳನ್ನು ಬಲ್ಲ ಮಗಳು ಮತ್ತು ದೊಡ್ಮನೆ ಸೊಸೆ ಗೆಲ್ಲಬೇಕು ಎಂದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಕಂಬನಿ ಒರೆಸಿ, ಬದುಕು ಕಟ್ಟಿಕೊಟ್ಟಿದೆ. ಸುಳ್ಳು ಮತ್ತು ಬರಿಯ ಭರವಸೆಗಳಿಗೆ ಜನತೆ ಎಂದಿಗೂ ವಿಶ್ವಾಸ ತೋರುವುದಿಲ್ಲ. ರಾಜ್ಯದ ೨೭ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಲಾಗಿದ್ದು, ಕನಿಷ್ಠ ೨೩ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಅದರಲ್ಲಿ ಶಿವಮೊಗ್ಗ ಕ್ಷೇತ್ರವೂ ಒಂದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ಹೆಚ್.ಗಣಪತಿ, ಜಯಶೀಲಗೌಡ ಅಂಕರವಳ್ಳಿ, ರಶೀಧ್‌ ಸಾಬ್, ಸುರೇಶ್ ಬಿಳವಾಣಿ, ಫಯಾಜ್ ಅಹ್ಮದ್, ಚಿಕ್ಕಸವಿ ನಾಗರಾಜ, ಎಂ.ಡಿ. ಶೇಖರ್, ಅತಿಕುರ್ ರೆಹಮಾನ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಪಂಗಳು ಸ್ಥಳೀಯ ಸರ್ಕಾರವಿದ್ದಂತೆ: ಎಚ್.ಟಿ.ಮಂಜು
ಚೈತನ್ಯ ಕುಮಾರ್‌ಗೆ ಬ್ರಾಹ್ಮಣ ಸಂಘದಿಂದ ಅಭಿನಂದನೆ