ಕಾಂಗ್ರೆಸ್‌ ಅಭ್ಯರ್ಥಿ ಗೀತಾ ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Apr 16, 2024, 01:01 AM IST
ಪೊಟೋ: 15ಎಸ್‌ಎಂಜಿಕೆಪಿ02ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಸೋಮವಾರ ನಾಮಪತ್ರ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಥ್‌ ನೀಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಸೋಮವಾರ ನಾಮಪತ್ರ ಸಲ್ಲಿಸಿದರು.ಇವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಥ್‌ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಸೋಮವಾರ ನಾಮಪತ್ರ ಸಲ್ಲಿಸಿದರು.ಇವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಥ್‌ ನೀಡಿದರು.

ಬೆಳಗಾವಿಯಿಂದ ವಿಶೇಷ ವಿಮಾನ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಗೀತಾ ಅವರು ಎರಡನೇ ಬಾರಿಗೆ ನಾಮಪತ್ರ ಸಲ್ಲಿಸುವ ವೇಳೆ ಅವರನ್ನು ಜೊತೆ ಗೂಡಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಬಿ.ಕೆ.ಸಂಗಮೇಶ್ವರ್‌, ಗೋಪಾಲಕೃಷ್ಣ ಬೇಳೂರು, ಎಂಎಡಿಬಿ ಅಧ್ಯಕ್ಷ ಆರ್‌.ಎಂ.ಮಂಜುನಾಥ್‌ ಇದ್ದರು.

ಗೀತಾ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ನಾಮಪತ್ರ ಸಲ್ಲಿಕೆ ನಂತರ ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಆರಂಭಗೊಂಡಿತು. ತೆರೆದ ವಾಹನದಲ್ಲಿ ಹೊರಟ ಗೀತಾ ಅವರ ಮೆರವಣಿಗೆಯಲ್ಲಿ ಬೊಂಬೆ ಕುಣಿತ, ವಾದ್ಯ ಮೇಳಗಳು ರಂಗು ತುಂಬಿತು.

ಮೆರವಣಿಗೆ ಗಾಂಧಿ ಬಜಾರ್‌ಗೆ ಬರುತ್ತಿದ್ದಂತೆಯೇ ಇಲ್ಲಿನ ವಿವಿಧ ಸಂಘಟನೆಯ ಮುಖಂಡರಿಂದ ಗೀತಾ ಅವರಿಗೆ ಹೂವಿನ ಹಾರ ಹಾಕಿ, ಉಡಿ ತುಂಬಿ ಹರಸಿದರು. ಸೇಬು ಹಣ್ಣಿನ ಹಾರ ಹಾಕಿ ಬೆಂಬಲ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್, ಬಿ.ಕೆ.ಸಂಗಮೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಕೆ.ಸುಕುಮಾರ್ ಶೆಟ್ಟಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌.ಪ್ರಸನ್ನಕುಮಾರ್‌, ಸೂಡ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎಂ.ಶ್ರೀಕಾಂತ ಮತ್ತಿತರರು ಇದ್ದರು.

ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಮನ ಗೆದ್ದಿವೆ. ಪ್ರಚಾರದ ವೇಳೆಯಲ್ಲಿ ಮಹಿಳೆಯರು ಹೆಚ್ಚಿನ ಒಲವು ತೋರುತ್ತಿದ್ದಾರೆ. ನನಗೆ ನಂಬಿಕೆ ಇದೆ. ಜನರು ಕೈ ಬಿಡುವುದಿಲ್ಲ.

-ಗೀತಾ, ಕಾಂಗ್ರೆಸ್‌ ಅಭ್ಯರ್ಥಿ, ಶಿವಮೊಗ್ಗ ಲೋಕಸಭಾ ಕ್ಷೇತ್ರ.ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರಬೇಕು: ಡಿಕೆಶಿ

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಅದೇ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರಿಗೆ ಮತ ನೀಡಿ ಹರಸಬೇಕು ಎಂದು ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್‌ಸ್ವಾಮಿ ಅವರು ಗ್ಯಾರಂಟಿ ಯೋಜನೆ ಬಗ್ಗೆ ಜರಿದಿದ್ದಾರೆ. ಹಳ್ಳಿಯ ಹೆಣ್ಣು ಮಕ್ಕಳು ಗ್ಯಾರಂಟಿಗಳಿಂದ ಹಾದಿ ತಪ್ಪುತ್ತಿದ್ದಾರೆ ಎಂದು ದೂರಿದ್ದಾರೆ. ಇದು ಖಂಡನೀಯ. ರಾಜ್ಯದೆಲ್ಲೆಡೆ ಈ ಬಗ್ಗೆ ಹೋರಾಟ ಮಾಡಬೇಕು ಎಂದರು. ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಿಳೆಯರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳ ಸುಧಾರಣೆ, ಹಿರಿಯ ನಾಗರಿಕರು, ಅಂಗವಿಕಲರ ಅಭ್ಯುದಯಕ್ಕೆ ಒತ್ತು ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಕನುಸುಗಳಿಗೆ ಜೀವ ತುಂಬಲು ಗೀತಾ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಪ್ರಾರ್ಥಿಸಿದರು. ಎಲ್ಇಡಿ ಡಿಸ್‌ಪ್ಲೇ ಬೋರ್ಡ್‌ ಬಿದ್ದು ಅವಘಡ

ಲೋಕಸಭಾ ಕ್ಷೇತ್ರದ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರ ನಾಮಪತ್ರ ಸಲ್ಲಿಕೆ ಪ್ರಯುಕ್ತ ಸೋಮವಾರ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಮೆರವಣಿಗೆ ವೇಳೆ ಪ್ರಚಾರದ ವಾಹನಕ್ಕೆ ಕಟ್ಟಿದ್ದ ಎಲ್ಇಡಿ ಡಿಸ್‌ಪ್ಲೇ ಬೋರ್ಡ್‌ ಬಿದ್ದು ನಾಲ್ವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಗಾಂಧಿ ಬಜಾರ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಮೆರವಣಿಗೆ ಹಿನ್ನೆಲೆ ಪ್ರಚಾರದ ವಾಹನಕ್ಕೆ ಕಟ್ಟಿದ್ದ ಭಾರಿ ಗಾತ್ರದ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಮಹಿಳೆ, ಪತ್ರಕರ್ತ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಮೆರವಣಿಗೆಗೆ ಆಗಮಿಸಿದ ವ್ಯಕ್ತಿ ಒಬ್ಬರ ತಲೆಗೆ ಪೆಟ್ಟು ಬಿದ್ದು ತಲೆಯಿಂದ ರಕ್ತ ಸುರಿದಿದೆ. ಪತ್ರಕರ್ತನ ಭುಜಕ್ಕೆ ಗಾಯವಾಗಿದೆ. ಸ್ಥಳೀಯರು ಗಾಯಾಳುಗಳಿಗೆ ಆರೈಕೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ