ಕನ್ನಡಪ್ರಭ ವಾರ್ತೆ ಚಾಮರಾಜನಗರ ದೇಶ, ರಾಜ್ಯದಲ್ಲಿ ೬೫ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಯಾವುದೇ ಕೊಡುಗೆಗಳನ್ನು ಕೊಟ್ಟಿಲ್ಲ ಎಂದು ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರುಹನುಮಂತು ಆರೋಪಿಸಿದರು.
ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಬಿಜೆಪಿ ಪರಿಶಿಷ್ಟ ಪಂಗಡಗಳ ಮುನ್ನಡೆ ಮಹಾಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಶ್ರೀಗಳ ಹೋರಾಟ ಫಲವಾಗಿ ಬಿಜೆಪಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದೆ. ವಾಲ್ಮೀಕಿ ಜಯಂತಿ ಸರ್ಕಾರ ಕಾರ್ಯಕ್ರಮ ಆಚರಣೆ, ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಶ್ರೀವಾಲ್ಮೀಕಿಯವರ ಹೆಸರು ನಾಮಕರಣ, ಎಸ್‌ಸಿ.ಎಸ್‌ಟಿ ಅಭಿವೃದ್ಧಿಗೆ ಒತ್ತು ನೀಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಇಂತಹ ಕೆಲಸ ಕಾಂಗ್ರೆಸ್ ಮಾಡದೆ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದರು.ಕಾಂಗ್ರೆಸ್ ದೇಶದ್ರೋಹ ಕೆಲಸ ಮಾಡುತ್ತಿದೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜು ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಎಸ್‌ಟಿ ಸಮುದಾಯ ೩೮ ಲಕ್ಷ ಇದೆ. ೨೦೧೧ ಜನಗಣತಿ ಪ್ರಕಾರ ಎಸ್‌ಟಿ ಸಮುದಾಯದ ಜನಸಂಖ್ಯೆ ೪೦ ಲಕ್ಷ ಇದ್ದು, ಇಂದಿನ ಜನಗಣತಿಗೆ ಹೊಲಿಕೆ ಮಾಡಿದರೆ ೬೦ ರಿಂದ ೭೦ ಲಕ್ಷ ಜನಸಂಖ್ಯೆ ಇರಬೇಕು. ಇದರಲ್ಲೂ ಕಾಂಗ್ರೆಸ್ ಅನ್ಯಾಯ ಮಾಡಿದೆ. ಇಲ್ಲಿಯ ಅನ್ನ, ಗಾಳಿ, ನೀರು ಸೇವನೆ ಮಾಡುವ ಕಾಂಗ್ರೆಸ್ ಕೆಲವರು ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹ ಕೆಲಸ ಮಾಡುತ್ತಿದ್ದಾರೆ. ಅಯೋಧ್ಯಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ೩೭೦ನೇ ವಿಧಿ ರದ್ದು, ಸಿಎಎ ಜಾರಿ ಇದು ಪ್ರಧಾನಿ ನರೇಂದ್ರಮೋದಿ ಅವರಿಂದ ಸಾಧ್ಯವಾಯಿತು ಎಂದರು.ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಘೋಷಣೆ ಮಾಡಿ ಹಾಲು ಸೇರಿದಂತೆ ಅಹಾರ ಪದಾರ್ಥಗಳ ಬೆಲೆ ಹೆಚ್ಚಿ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿದರು. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಸರಿಯಾಗಿ ೨ ಸಾವಿರ ಕೊಡುತ್ತಿಲ್ಲ ಐದು ಗ್ಯಾರಂಟಿ ಯೋಜನೆಗಳ ನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದರು.
ಅತ್ಯಧಿಕ ಮತಗಳಿಂದ ಬಾಲರಾಜ್ ಗೆಲ್ಲಿಸಿ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಎಸ್.ಬಾಲರಾಜು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನ ೩ನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಎಸ್‌ಸಿ, ಎಸ್‌ಟಿಗಳು ಒಂದು ದೇಹ ಎರಡು ಕಣ್ಣು ಇದ್ದಂತೆ. ಎಸ್‌ಸಿ, ಎಸ್‌ಟಿಗಳಿಗೆ ನಯಾಪೈಸೆ ಅನುದಾನ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಪಕ್ಷ ನಾಯಕ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚು ಮಾಡಿದೆ. ಶ್ರೀ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಣೆ ಮಾಡಿದೆ. ಪಕ್ಷದ ಉಪ್ಪಿನ ಋಣ ಸಮುದಾಯದ ಮೇಲಿದೆ ಆಗಾಗಿ ಕಳೆದ ಚುನಾವಣೆಗಳಲ್ಲಿ ಸಮುದಾಯ ಬಿಜೆಪಿ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಎಸ್.ಬಾಲರಾಜ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ 3ನೇ ಬಾರಿಗೆ ನರೇಂದ್ರಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕಡೆ ಕೊಂಡ್ಯೊಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಮಾತನಾಡಿ, ಕೇಂದ್ರ, ರಾಜ್ಯ, ಜಿಲ್ಲೆಯ ವರಿಷ್ಟರು ನಾಯಕರು, ಮುಖಂಡರೆಲ್ಲ ನನಗೆ ಆಶೀರ್ವಾದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ೨೦ ವರ್ಷಗಳ ರಾಜಕೀಯ ವನವಾಸಕ್ಕೆ ಒಂದು ಅವಕಾಶ ಸಿಕ್ಕಿದೆ. ನೀವು ನನಗೆ ಕೊಡುವ ಒಂದೊಂದು ಮತವನ್ನು ಮೋದಿಯವರಿಗೆ ಅರ್ಪಣೆ ಮಾಡಿ ೩ನೇ ಬಾರಿಯೂ ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ನನಗೊಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮೇಯರ್ ಶಿವಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಮಾಜಿ ಸಚಿವ ರಾಮದಾಸ್, ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಫಣೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡುಪ್ರಕಾಶ್, ಉಪಾಧ್ಯಕ್ಷ ಶಿವುವಿರಾಟ್, ನಗರ ಮಂಡಲ ಅಧ್ಯಕ್ಷ ಶಿವರಾಜ್, ಎಸ್‌ಟಿ ಮೋರ್ಚಾದ ರಾಜ್ಯದ ಕಾರ್ಯದರ್ಶಿ ಜಯಸುಂದರ್, ಮಂಜುಳ, ಅನಿಲ್, ಮಾಜಿ ಅಧ್ಯಕ್ಷ ಆರ್.ಸುಂದರ್, ಮುಖಂಡರಾದ ಎನ್.ಮಲ್ಲೇಶ್, ನಾಗಶ್ರೀಪ್ರತಾಪ್, ಕಪಿನಿನಾಯಕ, ನೂರೊಂದುಶೆಟ್ಟಿ, ಕಿನಕಹಳ್ಳಿ ರಾಚಯ್ಯ, ಬುಲೆಟ್‌ಚಂದ್ರು, ಪುನೀತ್, ಇತರರು ಭಾಗವಹಿಸಿದ್ದರು.