ಕನ್ನಡಪ್ರಭ ವಾರ್ತೆ ಹೊಸನಗರ
ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ತಾತ್ಕಾಲಿಕ ಹಿನ್ನಡೆ ಉಂಟಾಗಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ, ಅಧಿಕಾರ ಕಾಂಗ್ರೆಸ್ ಗುರಿಯಲ್ಲ ಕೋಮುವಾದಿ ಶಕ್ತಿಗಳ ಅಧಿಕಾರದಿಂದ ದೂರ ಇಡುವುದು ಕಾಂಗ್ರೆಸ್ ಗುರಿ ಆದ್ದರಿಂದ ಕಾರ್ಯಕರ್ತರು ಭ್ರಮನಿರಸನ ಅಥವಾ ಅಧೀರರಾಗುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.ಇಲ್ಲಿನ ಗಾಂಧಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಯ ಬದಲಾವಣೆಗೆ ಕೆಲವೊಮ್ಮೆ ಹಲವು ದಶಕಗಳು ಉರುಳಿದ ಅದೆಷ್ಟೋ ಉದಾಹರಣೆಗಳು ಪ್ರಪಂಚದಲ್ಲಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೂ, ಈ ಬಾರಿಯ ಚುನಾವಣೆಯಲ್ಲಿ ಅವರದ್ದು ಸೈದ್ಧಾಂತಿಕ ಗೆಲುವಲ್ಲ ಎಂದರು.
ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಾರದಿದ್ದರೂ, ದೇಶದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ ಜನರ ಚಿಂತನೆಗೆ ಹೊಸ ವಿಚಾರಗಳ ನೀಡಿದೆ. ಭಾರತ್ ಜೋಡೋ ಒಂದು ಯಶಸ್ವಿ ಕಾರ್ಯಕ್ರಮ ಅದರ ಪರಿಣಾಮದ ಪ್ರಭಾವ ಬಿಜೆಪಿಯವರಿಗೆ ಈಗ ಗೊತ್ತಾಗುತ್ತಿದೆ. ಕಾಂಗ್ರೆಸ್ ಗೆ ಇದೊಂದು ತಾತ್ಕಾಲಿಕ ಹಿನ್ನಡೆಯಷ್ಟೇ ಎನ್ನುವುದು ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು ಎಂದರು.ಮತದಾರರಿಗೆ ಆಮಿಷ:ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಜನರ ಭಾವನೆಗಳ ಕೆಣಕುವ ಮೂಲಕ ತನ್ನತ್ತ ಮತಗಳನ್ನು ಧ್ರುವೀಕರಣಗೊಳಿಸಿದೆ. ಅಲ್ಲದೇ ಹಣ, ಹೆಂಡದ ಆಮಿಷಗಳ ಮತದಾರರಿಗೆ ನೀಡಲಾಗಿತ್ತು. ಪ್ರತಿ ಬೂತ್ ಹಂತದಲ್ಲಿಯೂ ಚುನಾವಣೆಯ ಹಿಂದಿನ ದಿನ ಹಣದ ಹೊಳೆಯನ್ನೇ ಹರಿಸಲಾಗಿದೆ. ಸಾಮಾನ್ಯ ಮತದಾರರು ಆಮಿಷಗಳಿಗೆ ಒಳಗಾಗಬಹುದು ಎನ್ನುವ ಉದ್ದೇಶದಿಂದಲೇ ವಿದ್ಯಾವಂತರು, ಶಿಕ್ಷಕ ಮತದಾರರ ಒಳಗೊಂಡ ವಿಧಾನ ಪರಿಷತ್ ಅಸ್ತಿತ್ವದಲ್ಲಿದೆ. ಆದರೆ ವಿದ್ಯಾವಂತರೂ ಆಮಿಷಗಳಿಗೆ ಬಲಿಯಾಗುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಪ್ರಮುಖರಾದ ಬಿ ಜಿ ನಾಗರಾಜ್, ಬಿ.ಆರ್.ಪ್ರಭಾಕರ, ಅಶ್ವಿನಿಕುಮಾರ್, ಸಿಂಥಿಯಾ, ಕರುಣಾಕರ ಶೆಟ್ಟಿ, ಯಾಸಿರ್, ಮೋಹನಶೆಟ್ಟಿ, ಟೌನ್ ಅಧ್ಯಕ್ಷ ಗುರುರಾಜ್, ಜಯನಗರ ಗುರು ಮತ್ತಿತರರಿದ್ದರು.ಲೋಕಸಭೆ ಚುನಾವಣೆಯಲ್ಲಿ ಜನರ ನಿರೀಕ್ಷೆ ಬೇರೆಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಯಶಸ್ವಿ ಯೋಜನೆಗಳು. ಆ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ವರವಾಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರ ನಿರೀಕ್ಷೆಗಳು ಬೇರೆಯದೇ ಇರುತ್ತದೆ. ಈಗೇನಾದರೂ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ 160ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ.
ಕಿಮ್ಮನೆ ರತ್ನಾಕರ, ಮಾಜಿ ಸಚಿವ