ಕಾಂಗ್ರೆಸ್‌ಗೆ ದೇಶ ಒಗ್ಗೂಡಿಸೋದು ಗೊತ್ತಿಲ್ಲ, ಒಡೆಯೋದೆ ಗೊತ್ತಿರೋದು

KannadaprabhaNewsNetwork |  
Published : Feb 04, 2024, 01:32 AM IST
3ಎಚ್ಎಸ್ಎನ್19 : ಸುದ್ದಿಗಾರರ ಜತೆ ಮಾತನಾಡಿದ ಸಿ.ಟಿ.ರವಿ. | Kannada Prabha

ಸಾರಾಂಶ

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗಬೇಕು ಎಂಬ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಸಿ.ಟಿ.ರವಿ, ಒಡೆದು ಆಳುವ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ಗೆ ದೇಶವನ್ನು ಒಟ್ಟುಗೂಡಿಸಿ ಅಭ್ಯಾಸವೇ ಇಲ್ಲ ಎಂದು ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗಬೇಕು ಎಂಬ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಸಿ.ಟಿ.ರವಿ, ಒಡೆದು ಆಳುವ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ಗೆ ದೇಶವನ್ನು ಒಟ್ಟುಗೂಡಿಸಿ ಅಭ್ಯಾಸವೇ ಇಲ್ಲ ಎಂದು ಟೀಕಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುರೇಶ್‌ ಅವರು ಹೀಗೆ ಹೇಳುವುದನ್ನು ನೋಡಿದರೆ ರಾಹುಲ್‌ಗಾಂಧಿ ‘ಭಾರತ್ ಜೋಡೋ ಯಾತ್ರೆ’ ನಡೆಸುವ ಬದಲಾಗಿ ಭಾರತ್‌ ಥೋಡೋ ನಡೆಸಿದ್ದರೆ ಡಿ.ಕೆ.ಸುರೇಶ್ ಅವರ ಹೇಳಿಕೆಗಳಿಗೆ ತಾತ್ವಿಕವಾದ ಬಲ ಬರುತ್ತಿತ್ತು. ಕಾಂಗ್ರೆಸ್‌ನವರು ಈ ಹಿಂದಿನಿಂದ ಮಾಡಿಕೊಂಡು ಬಂದಿರುವುದೇ ಇದನ್ನೆ, ಜನರಿಗೆ ತೋರಿಸಲಿಕ್ಕೆ ಭಾರತ್‌ ಜೋಡೋ ಯಾತ್ರೆ. ಒಳಗೊಳಗೆ ಮಾಡುವುದು ಮಾತ್ರ ದೇಶ ಒಡೆಯುವ ಕೆಲಸ. ಈ ಹಿಂದೆ ಅಂದರೆ ಸ್ವಾತಂತ್ರ ಪೂರ್ವದಲ್ಲಿ ಕೂಡ ಕಾಂಗ್ರೆಸ್ ಇದನ್ನೇ ಮಾಡಿದ್ದು. ಅಂದು ಮೊಹಮದ್ ಆಲಿ ಜಿನ್ನಾ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದಾಗ ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡಿತು. ಈ ಮೂಲಕ ಅಂದಿನ ಭಾರತವನ್ನು ಒಡೆದು ಪಾಕಿಸ್ತಾನದ ಉದಯಕ್ಕೆ ಕಾಂಗ್ರೆಸ್ ಕಾರಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಷ್ಟ್ರ ಒಡೆಯುವ ಮಾತನ್ನು ಡಿ.ಕೆ.ಸುರೇಶ್ ಹೇಳಿದರೆ, ಜಾತಿ- ಜಾತಿ ನಡುವೆ ಒಡೆಯುವ ರಾಜಕಾರಣವನ್ನು ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಕಾಂಗ್ರೆಸ್‌ ನಾಯಕರು ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅಪರೂಪಕ್ಕೊಮ್ಮೆ ಮನುಷ್ಯತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಮಾಡುವುದೆಲ್ಲಾ ಜಾತಿ ರಾಜಕಾರಣ. ಬಡವರು ಎಲ್ಲಾ ಜಾತಿಯಲ್ಲೂ ಇದ್ದಾರೆ. ಯಾಕೆ ಅವರು ಬಡವರ ಪರ ಯೋಚನೆ ಮಾಡುತ್ತಿಲ್ಲ. ಬಡವರ ಪರವಾಗಿ ಏಕೆ ಮಾತನಾಡುತ್ತಿಲ್ಲ? ಜಾತಿಯನ್ನೆ ಮುಂದೆ ಇಟ್ಟುಕೊಂಡು ಏಕೆ ಮಾತಾನಾಡುತ್ತಾರೆ? ಎಂದು ಪ್ರಶ್ನಿಸಿದರು.ಎಲ್ಲಾ ಜಾತಿಯಲ್ಲೂ ಒಳ್ಳೆವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಹಾಗಾದರೆ ಜಾತಿ ದ್ವೇಷ ಯಾಕೆ ಇವರಿಗೆ? ಜಾತಿ ದ್ವೇಷ, ಜಾತಿ ಒಡೆದು ರಾಜಕಾರಣ ಮಾಡೋದು, ಭಾಷೆ ಹೆಸರಿನಲ್ಲಿ ರಾಜಕಾರಣ ಮಾಡೋದು ಕಾಂಗ್ರೆಸ್ ಕಲ್ಚರ್. ಆ ಕಾಂಗ್ರೆಸ್ ಸಂಸ್ಕೃತಿಯನ್ನೇ ಡಿ.ಕೆ.ಸುರೇಶ್ ಹೇಳಿದ್ದಾರೆ ಎಂದರು.

ಸಂಕುಚಿತ ಮನೋಭಾವ ಇರುವವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ. ದೇಶ ಒಡೆಯುತ್ತೇವೆ ಅಂತ ಹೊರಟ ಜಿನ್ನಾಗೆ ಇವರು ಬೆಂಬಲ ಕೊಟ್ಟರು. ಅದಾದ ನಂತರ ಸರ್ದಾರ್ ಪಟೇಲ್ ದೇಶವನ್ನು ಒಗ್ಗೂಡಿಸಿದರು ಎಂದರು.ರಜಾಕಾರರು, ಹೈದರಾಬಾದ್ ನಿಜಾಮನ ಮನಸ್ಥಿತಿಯವರಂತೆ ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ವರ್ತಿಸಬಾರದು. ಅಕಸ್ಮಾತ್ ವರ್ತಿಸಿದರೆ ನೀವು ನಿಜಾಮ ಅಲ್ಲ, ನಿಜಾಮನನ್ನೇ ಬಗ್ಗು ಬಡಿದಂತಹ ಸರ್ದಾರ್ ವಲ್ಲಭಾಯಿ ಪಟೇಲ್ ತರಹದ ನೇತೃತ್ವ ಬಿಜೆಪಿ ಕೈಯಲ್ಲಿ ಇದೆ ಎಂದರು.

ನಿಮ್ಮ ನಿಜಾಮಗಿರಿ ಇಲ್ಲಿ ನಡೆಯಲ್ಲ ಫೆ.7 ರಂದು ದೆಹಲಿಯಲ್ಲಿ ಅವರು ಪ್ರತಿಭಟನೆ ಮಾಡಲಿ, ಪ್ರತಿಭಟನೆ ಮಾಡಲು ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಅಂಕಿ-ಅಂಶಗಳನ್ನು ಮುಂದಿಟ್ಟು ಜನರಿಗೆ ಮನವರಿಕೆ ಮಾಡ್ತೀವಿ. ಅವರು ಹೇಳುವುದರಲ್ಲಿ ಎಷ್ಟು ಸತ್ಯ ಇದೆ, ಎಷ್ಟು ಸುಳ್ಳಿದೆ ಅನ್ನೋದನ್ನ ಜನರ ಮುಂದೆ ಇಡ್ತಿವಿ. ಇಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ ದೇಶ ಒಡೆಯಲು ಹಕ್ಕಿಲ್ಲ ಎಂದರು.

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು