ಧಾರವಾಡ
ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಇದನ್ನು ಮರೆಯಾಗಿಸಲು ಕಾಂಗ್ರೆಸ್ ಸರ್ಕಾರ ನಾಟಕ ಮಾಡುತ್ತಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆದಿಯಾಗಿ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬರೀ ಆರ್‌ಎಸ್‌ಎಸ್ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ. ರಾಜ್ಯದ ಹಿತಾಸಕ್ತಿ ಬಿಟ್ಟು ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಆಂಧ್ರಪ್ರದೇಶದ ನಾಯಕರು ವಿದೇಶಗಳಿಗೆ ಹೋಗಿ ಐಟಿ-ಬಿಟಿ ಕಂಪನಿಗಳ ಹೂಡಿಕೆಗೆ ಶ್ರಮವಹಿಸುತ್ತಿದ್ದಾರೆ. ನಮ್ಮಲ್ಲಿ ಅಧಿಕಾರಕ್ಕಾಗಿ ಏನೆಲ್ಲಾ ಶ್ರಮ ಪಡುತ್ತಿದ್ದಾರೆ ಎಂದು ಬೆಲ್ಲದ ಕಿಡಿಕಾರಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸದ ಬೆಲ್ಲದ, ತಮ್ಮ ವ್ಯಾಪ್ತಿಯಲ್ಲಿ ರಾಜಕೀಯ ಬಗ್ಗೆ ಮಾತನಾಡಲಿ. ಆದರೆ, ರಾಷ್ಟ್ರೀಯತೆಯ ವಿಚಾರ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾಡುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಮಾತನಾಡುವುದು ಸರಿಯಲ್ಲ. ರಾಷ್ಟ್ರೀಯತೆ ಬೆಳೆಸುವಂತಹ ಸಂಘ-ಸಂಸ್ಥೆಗಳ ಕೆಲಸಗಳಿಗೆ ನಾವು ಸ್ವಾಗತ ಮಾಡುತ್ತೇವೆ. ಡಾ. ಬಿ.ಆರ್. ಅಂಬೇಡ್ಕರ್ ತತ್ವ, ಸಿದ್ಧಾಂತ ಪ್ರತಿಪಾದಿಸುವುದು ಒಳ್ಳೆ ಕಾರ್ಯ. ಎಲ್ಲರೂ ಸೇರಿ ಸಂಘಟನಾತ್ಮಕವಾಗಿ ರಾಷ್ಟ್ರೀಯತೆ ಮನೋಭಾವದಿಂದ ಕೆಲಸ ಮಾಡಬೇಕಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಜಾಣ ರಾಜಕಾರಣಿ. ಮುಖ್ಯಮಂತ್ರಿಯಾಗಲು ಅಷ್ಟೊಂದು ಬೆಂಬಲ ಇಲ್ಲದ ಜಾರಕಿಹೊಳಿ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಬರುವ ದಿನಗಳಲ್ಲಿ ಡಾ. ಜಿ. ಪರಮೇಶ್ವರ್, ಆನಂತರ ಖರ್ಗೆ ಕುಟುಂಬದ ಹೆಸರು ಸಹ ಬರಲಿದೆ. ಇದೆಲ್ಲವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೋಡುತ್ತಿದ್ದು, ಸುಲಭವಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ಧಾರವಾಡದ ನಗರ ಬಸ್ ನಿಲ್ದಾಣ ನ. 1ರಂದು ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಸಾರಿಗೆ ಇಲಾಖೆಯ ಸಚಿವರ ಸಮಯಾವಕಾಶ ಕೇಳಿದ್ದು, ಶೀಘ್ರದಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದ ಸಿಟಿ ಬಸ್ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.