ದ್ವಾರಮಕ್ಕಿಯ ಮಾಜಿ ಸಚಿವ ಡಿ.ಎನ್.ಜೀವರಾಜ್ ಮನೆಯಲ್ಲಿ ಭೀಮ ಸಂಗಮ ಕಾರ್ಯಕ್ರಮ
ಬಿಜೆಪಿ ದಲಿತ ವಿರೋದಿ, ಸಂವಿಧಾನ ವಿರೋಧಿ ಎಂದು ಕಳೆದ 60 ವರ್ಷದಿಂದಲೂ ಕಾಂಗ್ರೆಸ್ ಪಕ್ಷ ಹಾಗೂ ಕೆಲವು ಬುದ್ಧಿ ಜೀವಿಗಳು ಸುಳ್ಳನ್ನು ಹೇಳಿಕೊಂಡೇ ಬರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್ ಆರೋಪಿಸಿದರು.
ಬುಧವಾರ ದ್ವಾರಮಕ್ಕಿಯ ಮಾಜಿ ಸಚಿವ ಡಿ.ಎನ್.ಜೀವರಾಜ್ ಮನೆ ಅಂಗಳದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ದಲಿತರು ಹಾಗೂ ಹಿಂದಳಿದ ವರ್ಗದವರಿಗೆ ಏರ್ಪಡಿಸಿದ್ದ ಭೀಮ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರು ಯಾರು, ಅವರಿಗೆ ಗೌರವ ನೀಡುತ್ತಿರುವುವರು ಯಾರು ಎಂದು ವಿಮರ್ಶೆ ಮಾಡಬೇಕಾಗಿದೆ. ಬಿಜೆಪಿ ಸಂವಿಧಾನವನ್ನು ದುರ್ಬಲ ಗೊಳಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಸಂವಿಧಾನವನ್ನು ದುರ್ಬಲಗೊಳಿಸಿದೆಯೇ ? ಎಂದು ಪ್ರಶ್ನಿಸಿದರು.ಭಾರತ ದೇಶದ ಐಕ್ಯತೆ ಕಾಪಾಡಬೇಕು ಎಂದು ಡಾ.ಅಂಬೇಡ್ಕರ್ ಬರೆದ ಸಂವಿಧಾನ ಹೇಳುತ್ತಿದೆ. ಸಂವಿಧಾನದಿಂದ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಆಹಾರ ಉತ್ಪಾದನೆ, ಉದ್ಯೋಗದಲ್ಲಿ ಸ್ವಾತಂತ್ರ ಸಿಕ್ಕಿದೆ. ಸಂವಿಧಾನದಿಂದಲೇ ಸಾಮಾನ್ಯ ಮನುಷ್ಯನು ಸಹ ಉನ್ನತ ಹುದ್ದೆಗೆ ಹೋಗಬಹುದಾಗಿದೆ. ಜಾತಿ, ಧರ್ಮವನ್ನು ನಾವು ಸೃಷ್ಠಿಸಿಕೊಂಡಿದ್ದೇವೆ. ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ರಕ್ತ ರಹಿತವಾಗಿ ದೇಶಕ್ಕೆ ಸಮಾನತೆ ತಂದಿದ್ದಾರೆ ಎಂದರು.
1952 ರಲ್ಲಿ ದೇಶದ ಮೊದಲ ಚುನಾವಣೆಯಲ್ಲಿ ಡಾ.ಅಂಬೇಡ್ಕರ್ ಬಾಂಬೆಯಿಂದ ಸ್ವರ್ಧಿಸಿದ್ದರು. ಆಗ ಕಾಂಗ್ರೆಸ್ ಅಂಬೇಡ್ಕರ್ ಅವರ ಆಪ್ತರನ್ನೇ ಎದುರಾಳಿಯಾಗಿ ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದರು.1954 ರ ಉಪ ಚುನಾವಣೆಯಲ್ಲಿ ಅಂಬೇಡ್ಕರ್ ಮತ್ತೆ ಸ್ಪರ್ಧಿಸಿದ್ದರು. ಆಗಲೂ ಕಾಂಗ್ರೆಸ್ ಪಿತೂರಿ ಮಾಡಿ ಅಂಬೇಡ್ಕರ್ ಅವರನ್ನು ಸೋಲಿಸಲಾಯಿತು. 1956 ರಲ್ಲಿ ಅಂಬೇಡ್ಕರ್ ತೀರಿಹೋದಾಗ ಅವರ ಅಂತ್ಯಕ್ರಿಯೆ ಮಾಡಲು ದೆಹಲಿಯಲ್ಲಿ ಜಾಗ ನೀಡಲಿಲ್ಲ. ಕಡೆಗೆ ಮುಂಬಯಿ ಸಮದ್ರ ತೀರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ವಿಚಿತ್ರ ಎಂದರೆ ಅಂಬೇಡ್ಕರ್ ಅವರ ಸೋಲಿಸಿದ್ದ ಅವರ ಆಪ್ತರಿಗೆ 1960ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.1991 ರಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾದಾಗ ಅಂಬೇಡ್ಕರ್‌ಗೆ ಭಾರತ ರತ್ನ ನೀಡಿ ಗೌರವಿಸಲಾಯಿತು ಎಂದರು.
ಕಾಂಗ್ರೆಸ್ ಇತಿಹಾಸವನ್ನು ತಿರುಚುತ್ತಿದೆ. ಬಿಜೆಪಿ ಬಗ್ಗೆ ಸುಳ್ಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ. ಸತ್ಯ ತಿರುಚಿಸುತ್ತಿದ್ದಾರೆ. ಸಾಕ್ಷಿ ಇಲ್ಲದೆ ಯಾವುದನ್ನು ನಂಬಬೇಡಿ ಎಂದು ದಲಿತ ಸಮುದಾಯಕ್ಕೆ ಕರೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಬಿಜೆಪಿ ,ಆರ್ ಎಸ್.ಎಸ್ ದಲಿತ ವಿರೋಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಜನರಿಗೆ ಸತ್ಯ ಹೇಳಲು ರಾಷ್ಟ ಮಟ್ಟದಲ್ಲೇ ಕಾರ್ಯಕ್ರಮ ಹಾಕಿಕೊಂಡಿದ್ದು ರಾಷ್ಟೀಯ ಸಂವಿಧಾನ ಗೌರವ ಅಭಿಯಾನ ನ.26 ರಿಂದ ಜ. 26 ರವರೆಗೂ ದೇಶದ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು, ಕೇಂದ್ರ ಸಚಿವರ ಮನೆಯಲ್ಲಿ ಭೀಮ ಸಂಗಮ ಕಾರ್ಯಕ್ರಮ ನಡೆಸಿ ದಲಿತರಿಗೆ ಸತ್ಯ ಹೇಳುತ್ತಾ ಬಂದಿದ್ದೇವೆ. ಮಹಿಳೆಯರಿಗೆ ಮನೆಯ ಒಳಗೆ ಕರೆದು ಅರಸಿನ, ಕುಂಕುಮ ನೀಡುತ್ತೇವೆ. ನಂತರ ಸಹ ಪಂಕ್ತಿ ಬೋಜನ ನಡೆಸುತ್ತಿದ್ದೇವೆ ಎಂದರು.