- ₹235 ಬೆಲೆ ರಸಗೊಬ್ಬರ ₹500 ದರದಂತೆ ಮಾರುತ್ತಿದ್ದಾರೆ: ರೇಣುಕಾಚಾರ್ಯ ಆರೋಪ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದರೂ, 8.73 ಲಕ್ಷ ಮೆಟ್ರಿಕ್ ಟನ್ ಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದ್ದರೂ, ಕೃತಕ ಅಭಾವ ಸೃಷ್ಟಿಸಿರುವ ಕಾಳಸಂತೆಕೋರರ ಕಾಂಗ್ರೆಸ್ ಸರ್ಕಾರ ಗೊಬ್ಬರವನ್ನು ₹500 ದರದಲ್ಲಿ ಮಾರಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸಗೊಬ್ಬರದ ಬೆಲೆ ₹265 ಇದೆ. ಅದಕ್ಕೆ 235 ಹೆಚ್ಚಿಗೆ ಸೇರಿಸಿ, ₹500 ದರದಂತೆ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಜೆ.ಪಿ.ನಡ್ಡಾ ನೇತೃತ್ವದಲ್ಲಿ ಕೇಂದ್ರದ ಮಟ್ಟದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಸಲು ಮುಂದಾಗಿದೆ. ತಕ್ಷಣಕ್ಕೆ 16 ಸಾವಿರ ಮೆಟ್ರಿಕ್ ಟನ್ ನೀಡಲಿದೆ. ಎಂಆರ್‌ಪಿಗಿಂತ ನಯಾ ಪೈಸೆ ಹೆಚ್ಚಿಗೆ ಇಲ್ಲದಂತೆ ಯೂರಿಯಾ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಸಗೊಬ್ಬರಕ್ಕಾಗಿ ಮತ್ತೆ ಬಂದ್ ನಡೆಸಬೇಕಾದೀತು ಎಂದು ರೇಣುಕಾಚಾರ್ಯ ಎಚ್ಚರಿಸಿದರು.
ಮುಖಂಡರಾದ ಬಿ.ಜಿ.ಅಜಯಕುಮಾರ, ರಾಜು ವೀರಣ್ಣ, ಪ್ರವೀಣ ಜಾಧವ್, ಚೇತನ್, ಪಂಜು, ರವಿಗೌಡ, ಅಜಯಕುಮಾರ ಇತರರು ಇದ್ದರು.
(ಟಾಪ್ ಕೋಟ್) ಧರ್ಮಸ್ಥಳ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಧರ್ಮಾಧಿಕಾರಿ ಅವರಿಗೆ, ಶ್ರೀಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಹೀಗೆಲ್ಲಾ ಮಾಡುತ್ತಿದ್ದಾರೆ. ಅಕ್ರಮವಾಗಿ ಹೂತಿಟ್ಟ ಶವಗಳ ಬಗ್ಗೆ ಮಾಹಿತಿ ಇದೆಯೆಂದು ಬಂದ ವ್ಯಕ್ತಿ ಮುಖ ಮುಚ್ಚಿಕೊಳ್ಳುವಂಥದ್ದು ಏನಿತ್ತು? ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಕುರ್ಚಿ ಕದನದಲ್ಲಿ ರೈತರನ್ನು ಬೀದಿಪಾಲು ಮಾಡಬಾರದು. ನ್ಯಾನೊ ಗೊಬ್ಬರ ಕೇಂದ್ರ ಸರ್ಕಾರವೂ ಶಿಫಾರಸು ಮಾಡಿದೆ. ರೈತರು ಯೂರಿಯಾದಂತೆ ನ್ಯಾನೊ ಗೊಬ್ಬರ ಬಳಕೆಗೂ ಗಮನ ಹರಿಸಬೇಕು.
- - -