ಹೊಸಪೇಟೆ: ರಾಜ್ಯ ಸರ್ಕಾರಕ್ಕೆ ನ್ಯಾಯಬದ್ಧವಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಳಿಸಲು ಅವಕಾಶವಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ 101 ಜಾತಿಗಳಿಗೆ ಸಾಮಾಜಿಕ ನ್ಯಾಯಯುತ ಒಳಮೀಸಲಾತಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಮಾದಿಗ, ಸಮಗಾರ, ದೋಹರ, ದಕ್ಕಲಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಸದಸ್ಯ ಬಲ್ಲಾಹುಣ್ಸಿ ರಾಮಣ್ಣ ಆರೋಪಿಸಿದರು.
ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ ದಾಸ್ ಆಯೋಗವನ್ನು ರಚಿಸಿ, ದಲಿತರ ಮೀಸಲು ನಿಧಿಯಿಂದ ₹120 ಕೋಟಿ, ಒದಗಿಸಿ ಪರಿಶಿಷ್ಟ ಜಾತಿಗಳ ಗಣತಿ ನಡೆಸಿ ವರದಿ ಸಿದ್ಧಪಡಿಸಲು ಹೇಳಿತ್ತು. ಆದರೆ, ಅದೇ ಸರ್ಕಾರ ಆಯೋಗದ ಶಿಫಾರಸನ್ನು ಪರಿಗಣಿಸದೇ ಅವೈಜ್ಞಾನಿಕ ರಾಜಕೀಯ ಸೂತ್ರ ರೂಪಿಸಿ ಮೀಸಲಾತಿ ಹಂಚಿಕೆ ಮಾಡಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಗೊಂದಲ ಮುಂದುವರೆದಿದೆ. ಇದರಲ್ಲಿ ಗುರುತಿಸಿಕೊಂಡವರು ಪ್ರವರ್ಗ 1 ಅಥವಾ ಪ್ರವರ್ಗ 2 ರಲ್ಲಿ ಎಲ್ಲಿ ಬೇಕಾದರೂ ಜಾತಿ ಪ್ರಮಾಣಪತ್ರ ಪಡೆಯಬಹುದೆಂಬ ಸರ್ಕಾರದ ಆದೇಶವನ್ನು ದುರುಪಯೋಗಪಡಿಸಿಕೊಳಲಾಗುತ್ತಿದೆ. ಮಾದಿಗರಲ್ಲದವರೂ ಪ್ರವರ್ಗ 1ರಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಅವಕಾಶ ಕೊಟ್ಟಿರುವುದು ಒಳ ಮೀಸಲಾತಿಯ ಮೂಲ ಉದ್ದೇಶವನ್ನೇ ಸೋಲಿಸಿದೆ. ರಾಜ್ಯ ಎಸ್ಸಿ ಪಟ್ಟಿಯಲ್ಲಿ 98 ಜಾತಿಗಳಿವೆ ಇಲ್ಲವೇ 101 ಜಾತಿಗಳಿದೆ ಎಂಬುದು ಸ್ಪಷ್ಟವಿಲ್ಲದಾಗಿದೆ ಎಂದರು.
ಒಕ್ಕೂಟದ ಸದಸ್ಯ ಕೆ.ರಾಮಣ್ಣ ಮಾತನಾಡಿ, ರಾಜಕೀಯ ಒತ್ತಡಗಳಿಗೆ ಮಣಿದು ಬಡ್ತಿ ಅವಕಾಶಗಳನ್ನು ಒಳಮೀಸಲಾತಿಯಿಂದ ಹೊರಗಿಡಲಾಗಿದೆ. ಸರ್ಕಾರದ ನಿಯಮಾನುಸಾರ ಖಾಲಿ ಇರುವ ಹುದ್ದೆಗಳಲ್ಲಿ ಶೇ.50ರಷ್ಟು ನೇರ ನೇಮಕಾತಿ ಮೂಲಕ ಶೇ.50 ಹುದ್ದೆಗಳು ಬಡ್ತಿ ಮೂಲಕ ಆಗುತ್ತದೆ. ಆದರೆ, ಮಸೂದೆಯಲ್ಲಿ ಉದ್ದೇಶ ಪೂರ್ವಕವಾಗಿ ಬಡ್ತಿ ಅವಕಾಶಗಳನ್ನು ಸೇರ್ಪಡೆಗೊಳಿಸಿಲ್ಲ. ಸರ್ಕಾರದ ಈ ಧೋರಣೆ ಒಳಮೀಸಲಾತಿಯ ಆಶಯವನ್ನೇ ಸೋಲಿಸಿದೆ. ರಾಜ್ಯ ಸರ್ಕಾರ ಎಸ್‌ಸಿಪಿ ಯೋಜನೆಯಲ್ಲಿ ಒಳ ಮೀಸಲಾತಿ ಜಾರಿಗೆ ತರಬೇಕು. ಅತ್ಯಂತ ಹಿಂದುಳಿದ, ಅತಿ ಸಣ್ಣ 59 ಜಾತಿಗಳಿರುವ ಅಲೆಮಾರಿಗಳ ಗುಂಪಿಗೆ ನ್ಯಾ.ನಾಗಮೋಹನ್ ದಾಸ್ ಆದ್ಯತೆ ಒದಗಿಸಿ ಪ್ರವರ್ಗ 1ರಲ್ಲಿ ಪ್ರತ್ಯೇಕ ಅವಕಾಶ ಕಲ್ಪಿಸಿದ್ದರು. ಆದರೆ, ಸರ್ಕಾರ ಅಲೆಮಾರಿಗಳನ್ನು ಕೊನೆಯ ಗುಂಪಿಗೆ ಬಲಿಷ್ಟ ಜಾತಿಗಳ ಜೊತೆಗೆ ಹಾಕಿ ಅನ್ಯಾಯವೆಸಗಿದ್ದು, ಸಮುದಾಯಗಳನ್ನು ಬೀದಿಗೆ ಬರುವಂತೆ ಮಾಡಿ ವಂಚಿಸಿದೆ ಎಂದರು.ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಂಬಂಧಿತ 29 ಜಾತಿಗಳಿವೆ. ಆದರೆ ಒಳಮೀಸಲಾತಿಗಾಗಿ ಮಾಡಲಾದ ಪ್ರವರ್ಗ 1ರಲ್ಲಿ ಮಾದಿಗ ಸಂಬಂಧಿತ 16 ಜಾತಿಗಳಿವೆ. ಸಣ್ಣ ಜಾತಿಗಳನ್ನು ಬೋವಿ, ಬಂಜಾರ ಜಾತಿಗಳ ನಡುವೆ ಸ್ಪರ್ಧೆಗೆ ಇಳಿಸಿರುವುದು ಸರ್ಕಾರದ ಅಮಾನವೀಯ ಮತ್ತು ಅವೈಜ್ಞಾನಿಕ ಧೋರಣೆಯಾಗಿದೆ ಎಂದು ಆರೋಪಿಸಿದರು. ಒಕ್ಕೂಟದ ಸದಸ್ಯರಾದ ಎಚ್.ರವಿಕುಮಾರ್, ಪೂಜಪ್ಪ, ಶ್ರೀನಿವಾಸ ಇದ್ದರು.