ಆಂತರಿಕ ತಿಕ್ಕಾಟದಿಂದಲೇ ಕಾಂಗ್ರೆಸ್ ಸರ್ಕಾರ ಪತನ: ಸಂಸದ ಜಗದೀಶ ಶೆಟ್ಟರ್‌

KannadaprabhaNewsNetwork | Published : Jan 4, 2025 12:30 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಆಂತರಿಕ ತಿಕ್ಕಾಟ ನಡೆಯುತ್ತಿದೆ. ಯಾವುದೇ ಹಂತದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್‌ ಭ‍ವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಆಂತರಿಕ ತಿಕ್ಕಾಟ ನಡೆಯುತ್ತಿದೆ. ಯಾವುದೇ ಹಂತದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್‌ ಭ‍ವಿಷ್ಯ ನುಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್‌ ವಿದೇಶ ಪ್ರಯಾಣ ಹೋದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆಯಲ್ಲಿ ಸಭೆ ನಡೆದಿದೆ. ಸರ್ಕಾರದ ಮೇಲೆ ಮುಖ್ಯಮಂತ್ರಿಗೆ ಹಿಡಿತ ಇಲ್ಲ. ಗುತ್ತಿಗೆದಾರರು ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಸರ್ಕಾರ ಪತನವಾಗಬಹುದು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ವಿದೇಶಕ್ಕೆ ತೆರಳಿದ ಸಂದರ್ಭದಲ್ಲೇ ಸಚಿವ ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರು ಬದಲಾವಣೆಯಾಗಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ, ತಮ್ಮ ನಿವಾಸದಲ್ಲಿ ಔತಣಕೂಟದ ಹೆಸರಿನಲ್ಲಿ ಸಭೆ ನಡೆಸಿರುವುದನ್ನು ನೋಡಿದರೆ ಸರ್ಕಾರದ ಆಡಳಿತ ಉತ್ತಮವಾಗಿ ನಡೆಯುತ್ತಿಲ್ಲ ಎಂಬುದು ಸಾಬೀತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಸಾರಿಗೆ ಬಸ್ ದರವನ್ನು ಶೇ.15ರಷ್ಟು ಹೆಚ್ಚಿಸಿದ್ದು ಸರಿಯಲ್ಲ. ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆರ್ಥಿಕವಾಗಿ ದಿವಾಳಿಯಾಗಿದೆ. ಮೊದಲು ಶಕ್ತಿ ಯೋಜನೆ ಬಂದ್ ಮಾಡಿ, ಸರ್ಕಾರ ಸಾರಿಗೆ ದರ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು. ಅಲ್ಲಿಯವರೆಗೂ ಬಿಜೆಪಿಯಿಂದ ಹೋರಾಟ ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ‌. ಹಾಲಿನ ದರ ಹಾಗೂ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದೆ. ಮೊದಲೇ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದನ್ನು ಕಡಿಮೆ ಮಾಡಿ. ಸಾಕಷ್ಟು ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಎಸ್‌ಡಿಎ ನೌಕರ ರುದ್ರೇಶ್ ಯರಗಣ್ಣವರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ನ್ಯಾಯ ಕೊಡಿಸಬೇಕಿದ್ದ ಸರ್ಕಾರ ಆರೋಪಿ ಸ್ಥಾನದಲ್ಲಿರುವ ತಹಸೀಲ್ದಾರ್‌ ಕೆಲಸ ಮಾಡುತ್ತಿದ್ದಾನೆ. ಅವರ ಮೇಲೆ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದರು.

Share this article