ಗುಡಿಬಂಡೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅದಕ್ಕೆ ಇತ್ತೀಚೆಗೆ ನಡೆದ ಬಳ್ಳಾರಿಯ ಘಟನೆಯೇ ಉದಾಹರಣೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಆರೋಪ ಮಾಡಿದರು.
ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಿ ಮೂರು ವರ್ಷಗಳೇ ಕಳೆದರೂ, ಈವರೆಗೂ ಆಸ್ಪತ್ರೆಗೆ ಬೇಕಾದ ಸರಿಯಾದ ಸಲಕರಣೆಗಳಿಲ್ಲ, ಎಚ್.ಆರ್ ಸಿಬ್ಬಂದಿ ನೇಮಕವಾಗಿಲ್ಲ. ನಮ್ಮ ಅವಧಿಯಲ್ಲಿ ಮಂಚೇನಹಳ್ಳಿ, ಗೌರಿಬಿದನೂರು ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಹಾಗೂ ತಾಲೂಕು ಆಸ್ಪತ್ರೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದೆವು. ಆದರೆ ಈಗಿನ ಸರ್ಕಾರ ಕನಿಷ್ಠ ಸಿಬ್ಬಂದಿ ನೇಮಕ ಮಾಡುತ್ತಿಲ್ಲ, ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳೂ ಸಿಗುತ್ತಿಲ್ಲ ಎಂದು ದೂರಿದರು.
ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ನೋಡಿದರೆ ಭಯವಾಗುತ್ತದೆ. ಒಂದು ವೇಳೆ ರಾಜ್ಯದಲ್ಲಿ ಏನಾದರೂ ಭಯಾನಕ ಕಾಯಿಲೆ ಬಂದರೆ ಜನರನ್ನು ಆ ದೇವರೇ ಕಾಪಾಡಬೇಕು. ಈ ಸರ್ಕಾರಕ್ಕೆ ಜನರ ಹಿತಕ್ಕಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಮರೆತು ಕೇವಲ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಹೇಳಿಕೊಳ್ಳುವಂತಹ ಕೆಲಸವಾಗಿಲ್ಲ, ಇನ್ನುಳಿದ ಎರಡು ವರ್ಷಗಳಲ್ಲಿ ಇವರು ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಸುಧಾಕರ್ ಲೇವಡಿ ಮಾಡಿದರು.