ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರ್ಕಾರ-ಸಿದ್ದರಾಮಯ್ಯ

KannadaprabhaNewsNetwork | Published : Nov 3, 2023 12:31 AM

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷ ಸುಭದ್ರವಾಗಿಯೇ ಇರುತ್ತದೆ. ಅದನ್ನ ಕೆಡವಲು ಸಾಧ್ಯವಿಲ್ಲ. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷ ಸುಭದ್ರವಾಗಿಯೇ ಇರುತ್ತದೆ. ಅದನ್ನ ಕೆಡವಲು ಸಾಧ್ಯವಿಲ್ಲ. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸುವ ಪ್ರಯತ್ನ ಫಲಿಸದು. ನಮ್ಮ ಶಾಸಕರು ಅಸಮಾಧಾನಗೊಂಡಿಲ್ಲ ಎಂದರು.

ಆದರೆ, ಸಿಎಂ ಬದಲಾವಣೆ ಕುರಿತು ನೇರವಾಗಿ ಪ್ರತಿಕ್ರಿಯೆ ನೀಡದ ಅವರು, ನಮ್ಮದೇ ಸರ್ಕಾರ ಐದು ವರ್ಷ ಇರುತ್ತದೆ ಎಂದು ಪುನರುಚ್ಚರಿಸಿದರಲ್ಲದೆ, ಸರ್ಕಾರ ಸುಭದ್ರವಾಗಿಯೇ ಇದೆ ಎಂದಷ್ಟೇ ಹೇಳಿದ್ದಾರೆ.ಸರ್ಕಾರ ಬೀಳಿಸುವ ಕುರಿತು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಅದು ಕೈಗೂಡುವ ಪ್ರಶ್ನೆಯೇ ಇಲ್ಲ. ಬಿ.ಎಸ್‌. ಯಡಿಯೂರಪ್ಪ ಈಗಾಗಲೇ ರಾಜಕೀಯವಾಗಿ ನಿವೃತ್ತಿಯಾಗಿದ್ದಾರೆ. ಪಕ್ಷ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಕಣ್ಣೀರು ಹಾಕಿಸಿದೆ. ಹೀಗಾಗಿ, ಯಡಿಯೂರಪ್ಪ ನೀಡುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ: ಬಿಜೆಪಿ ಬರ ಕುರಿತು ಮಾತನಾಡುವ ಮುನ್ನ ಮೊದಲು ಕೇಂದ್ರದಿಂದ ರಾಜ್ಯಕ್ಕೆ ಕೊಡಬೇಕಾದ ಬರ ಪರಿಹಾರ ಕೊಡಿಸಲಿ. ಕೇಂದ್ರ ರಾಜ್ಯದ ಕುರಿತು ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ನಾವು ಕೋರಿರುವ ₹17,900 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರವನ್ನು ಆಗ್ರಹಿಸಿದರು.

ಕೇಂದ್ರ ನಾಯಕರಾದ ರಣದೀಪಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ ರಾಜ್ಯಕ್ಕೆ ಬಂದಿರುವುದು ಲೋಕಸಭಾ ಚುನಾವಣೆಯ ಕುರಿತು ಚರ್ಚೆ ಮಾಡಲು ಮತ್ತು ನಿಗಮ ಮಂಡಳಿ ನೇಮಕದ ಕುರಿತು ಚರ್ಚೆ ಮಾಡಲು. ಇದಕ್ಕೆ ಏನೇನೋ ಅರ್ಥ ಕಲ್ಪಿಸಬೇಡಿ ಎಂದರು.

ಬರ ನಿರ್ವಹಣೆ ನಿಭಾಯಿಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಲಾಗಿದೆ. ಅವರು ಪ್ರವಾಸ ಮಾಡಿ, ಅಗತ್ಯ ಕ್ರಮ ವಹಿಸುತ್ತಾರೆ. ಜನರ ಅಹವಾಲು ಆಲಿಸಿ, ಪರಿಹಾರ ನೀಡಲಿದ್ದಾರೆ ಎಂದರು.

ಕೃಷಿ ಪಂಪ್‌ಸೆಟ್‌ಗೆ ನೀಡುತ್ತಿದ್ದ ಸೌಲಭ್ಯಗಳನ್ನು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಅದನ್ನು ಮುಂದುವರಿಸಲಾಗುತ್ತದೆ. ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡಿ, ಸೂಚನೆ ನೀಡಲಾಗುವುದು ಎಂದರು.

ರಮೇಶ ಜಾರಕಿಹೊಳಿ ಸೋತ ಮನೆಯಲ್ಲಿರುವುದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ನೀಡಲು ಆಗಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದರೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಲೇ ಆರ್ಥಿಕ ಶಿಸ್ತು ಕಾಪಾಡುತ್ತಿದ್ದೇವೆ ಎಂದರು.

Share this article