ಸವಣೂರು: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 23 ತಿಂಗಳ ಕಂತನ್ನು ನೀಡಲು ಯಶಸ್ವಿಯಾಗಿದ್ದು, ಹೀಗಾಗಿ ಕಾಂಗ್ರೆಸ್ ಸರ್ಕಾರ ಬಡವರು ದೀನ- ದಲಿತರು, ರೈತರ ಕೂಲಿ ಕಾರ್ಮಿಕರ ಪರವಾದ ಸರ್ಕಾರವಾಗಿದೆ ಎಂದು ಶಾಸಕ ಯಾಸೀರ ಅಹ್ಮದ ಖಾನ್ ಪಠಾಣ ತಿಳಿಸಿದರು.ತಾಲೂಕಿನ ಚಳ್ಳಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಆಯುಷ್ಮಾನ್ ಆರೋಗ್ಯ ಮಂದಿರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರಕ್ಕೆ ಸುಮಾರು ₹600 ಕೋಟಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ಬಂಕಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಮುಂಡಗೋಡ, ಯಲ್ಲಾಪುರ, ಕಾರವಾರ ಮಾರ್ಗವಾಗಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಜೋಡಣೆ, ವರದಾ- ಬೇಡ್ತಿ ನದಿಗಳ ಜೋಡಣೆ ಮಾಡಿ ಅನುಕೂಲ ಕಲ್ಪಿಸಬೇಕು ಎಂದರು.ಶಿಗ್ಗಾಂವಿ ಮತ್ತು ಸವಣೂರು ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ರೈತರ ಅನುಕೂಲಕ್ಕೆ ಬಾರದಂತಾಗಿದೆ. ಕೇಂದ್ರದಿಂದ ಯೋಜನೆಗೆ ನೆರವು ನೀಡಿದಾಗ ರೈತರಿಗೆ ವರದಾನವಾಗಲಿದೆ ಎಂದರು.
ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ 130 ವರ್ಷದ ಹಳೆಯದಾದ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ₹50 ಕೋಟಿ, ತವರಮೆಳ್ಳಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹4 ಕೋಟಿ ಅನುದಾನವನ್ನು ನೀಡಿದ್ದು, ತ್ವರಿತವಾಗಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬಿಜೆಪಿ ಮುಖಂಡ ಭರತ ಬೊಮ್ಮಾಯಿ, ತಹಸೀಲ್ದಾರ್ ಭರತರಾಜ್ ಕೆ.ಎನ್., ಇಒ ಬಿ.ಎಸ್. ಸಿಡೇನೂರ, ಡಿಎಚ್‌ಒ ಡಾ. ಜಯಾನಂದ ಎಂ., ಟಿಚ್‌ಒ ಚಂದ್ರಕಲಾ ಜೆ., ಗ್ರಾಪಂ ಅಧ್ಯಕ್ಷ ಶ್ರೀಕಾಂತ ದೇವಿಹೊಸೂರ, ಗ್ಯಾರಂಟಿ ಯೋಜನೆ ಅಧ್ಯಕ್ಷ ಸುಭಾಸ ಮಜ್ಜಗಿ, ಗ್ರಾಪಂ ಸದಸ್ಯರಾದ ಲಕ್ಷ್ಮವ್ವ ನಾಯಕ, ಮಹದೇವಪ್ಪ ಮಲ್ಲಾಡದ, ನವೀನ ಸವಣೂರ, ಅನಿಲಕುಮಾರ ಹೊಂಬಳದ, ಸವಣೂರ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಶಂಕರಗೌಡ ಪಾಟೀಲ ಸೇರಿದಂತೆ ಸಾರ್ವಜನಿಕರು ಇದ್ದರು.